ನವದೆಹಲಿ: ಕಾಂಗ್ರೆಸ್ ಪಕ್ಷವು ಶನಿವಾರ ತನ್ನ ಸಂಘಟನೆಯನ್ನು ಪುನರ್‌ರಚಿಸಿದ್ದು ಸಚಿನ್ ಪೈಲಟ್ ಸೇರಿದಂತೆ ನಾಲ್ವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ಹೊಸದಾಗಿ ನೇಮಕ ಮಾಡಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶದ ಉಸ್ತುವಾರಿ ಹೊಣೆಯಿಂದ ಬಿಡುಗಡೆ ಗೊಳಿಸಿದೆ.
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದ ಉಸ್ತುವಾರಿ ಜೊತೆಗೆ ಹೆಚ್ಚುವರಿಯಾಗಿ ಮಧ್ಯಪ್ರದೇಶದ ಉಸ್ತುವಾರಿಯಾಗಿಯೂ ಇರುವರು. ಕೆ.ಸಿ. ವೇಣುಗೋಪಾಲ್ ಅವರನ್ನು ಪ್ರಧಾನಕಾರ್ಯದರ್ಶಿ (ಸಂಘಟನೆ) ಮತ್ತು ಜೈರಾಮ್ ರಮೇಶ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ (ಸಂಪರ್ಕ) ಉಳಿಸಿಕೊಳ್ಳಲಾಗಿದೆ. ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಮತ್ತು ಉಸ್ತುವಾರಿಗಳಾದ ರಜನಿ ಪಾಟೀಲ್, ಭಕ್ತ ಚರಣ್ ದಾಸ್, ಹರೀಶ್ ಚೌಧರಿ ಮತ್ತು ಮನೀಶ್ ಅವರನ್ನು ಕೈಬಿಡಲಾಗಿದೆ.
ಛತ್ತೀಸಗಢ ಉಸ್ತುವಾರಿಯಾಗಿ ಸಚಿನ್ ಪೈಲಟ್, ಉತ್ತರಪ್ರದೇಶ ಉಸ್ತುವಾರಿಯಾಗಿ ಅವಿನಾಶ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ. ಈ ರಾಜ್ಯಗಳಲ್ಲಿ ಈ ಹಿಂದೆ ಅನುಕ್ರಮವಾಗಿ ಉಸ್ತುವಾರಿ ವಹಿಸಿದ್ದ ಕುಮಾರಿ ಶೆಲ್ಜಾ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉಸ್ತುವಾರಿ ಹೊಣೆಯಿಂದ ಬಿಡುಗಡೆ ಮಾಡಲಾಗಿದೆ. ಕುಮಾರಿ ಶೆಲ್ಜಾ ಅವರಿಗೆ ಉತ್ತರಾಖಂಡದ ಉಸ್ತುವಾರಿ ವಹಿಸಲಾಗಿದೆ. ಪ್ರಿಯಾಂಕಾ ಗಾಂಧಿ ಈಗ ಪ್ರಧಾನ ಕಾರ್ಯದರ್ಶಿಯಾಗಿ ಮಾತ್ರ ಇರಲಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ. ಚುನಾವಣೆಯಲ್ಲಿ ಪ್ರಿಯಾಂಕಾ ಅವರು ನಿರ್ಣಾಯಕ ಪಾತ್ರ ವಹಿಸುವ ಸಂಭವ ಇದೆ.
ಹೊಸ ಪ್ರಧಾನ ಕಾರ್ಯದರ್ಶಿ ಜಿ.ಎ. ಮಿರ್ ಅವರನ್ನು ಜಾರ್ಖಂಡ್ ಮತ್ತು ಪಶ್ಚಿಮಬಂಗಾಳ (ಹೆಚ್ಚುವರಿ) ಉಸ್ತುವಾರಿಯಾಗಿ, ದೀಪಾ ದಾಸ್ ಮುನ್ಷಿ ಅವರನ್ನು ಕೇರಳ, ಲಕ್ಷದ್ವೀಪ ಮತ್ತು ತೆಲಂಗಾಣ (ಹೆಚ್ಚುವರಿ) ಉಸ್ತುವಾರಿಯಾಗಿ ನೇಮಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿರುವ ದೀಪಕ್ ಬಾಬಾರಿಯ ಅವರಿಗೆ ದೆಹಲಿ, ಹೆಚ್ಚುವರಿಯಾಗಿ ಹರಿಯಾಣದ ಉಸ್ತುವಾರಿ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.