ಅಯೋಧ್ಯೆ: ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬಾಲಿವುಡ್ ಬಾದ್‌ಷಾ ಅಮಿತಾಬ್ ಬಚ್ಚನ್, ಉದ್ಯಮಿಗಳಾದ ಮುಕೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದಂತೆ 7,000 ಗಣ್ಯರನ್ನು ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.
2024 ಜನವರಿ 22ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಪ್ರಸಿದ್ಧ ಟಿ.ವಿ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರಧಾರಿ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ.
3,000 ವಿವಿಐಪಿಗಳು ಸೇರಿದಂತೆ 7,000 ಮಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನ ಪತ್ರಿಕೆಯನ್ನು ನೀಡಿದೆ. ಅಯೋಧ್ಯೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ 50 ಕರಸೇವಕರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮದೇವ್, ಆಹ್ವಾನ ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ.
ದೇಶದೆಲ್ಲೆಡೆಯ 4,000 ಸಂತರನ್ನು ಆಹ್ವಾನಿಸಲಾಗಿದೆ. ನ್ಯಾಯಾಧೀಶರು, ವಿಜ್ಞಾನಿಗಳು, ಬರಹಗಾರರು, ಕವಿಗಳು, ಪುರೋಹಿತರು, ಧಾರ್ಮಿಕ ಮುಖಂಡರು, ಪೌರ ಕಾರ್ಮಿಕರು, ನಿವೃತ್ತ ಸೇನಾ ಅಧಿಕಾರಿಗಳು, ವಕೀಲರು, ಸಂಗೀತಗಾರರು, ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಆಹ್ವಾನಿಸಲಾಗಿದೆ.
50 ರಾಷ್ಟ್ರಗಳ ತಲಾ ಒಬ್ಬರು ಪ್ರತಿನಿಧಿಗಳನ್ನು ಆಹ್ವಾನಿಸಲು ಪ್ರಯತ್ನ ನಡೆಯುತ್ತಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ರಾಮಮಂದಿರ ಹೋರಾಟವನ್ನು ಬೆಂಬಲಿಸಿದ ಪತ್ರಕರ್ತರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅವರಿಲ್ಲದಿದ್ದರೆ ಹೋರಾಟ ಅಪೂರ್ಣವಾಗಿರುತ್ತಿತ್ತು ಎಂದು ವಿಎಚ್‌ಪಿ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.
7,000 ಆಹ್ವಾನಿತರಲ್ಲಿ ಸುಮಾರು 4,000 ಧಾರ್ಮಿಕ ಮುಖಂಡರು ಹಾಗೂ 3,000 ವಿವಿಐಪಿಗಳು ಇದ್ದಾರೆ. ಆಹ್ವಾನಿತರು ರಿಜಿಸ್ಟ್ರೇಷನ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಬಾರ್ ಕೋಡ್ ಸೃಷ್ಟಿಸಿ ಎಂಟ್ರಿ ಪಾಸ್ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.