ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ನೀಡಿದ್ದ ಹೊಸ ಜವಾಬ್ದಾರಿಯನ್ನು ತಿರಸ್ಕರಿಸಿರುವ ಅಲೋಕ್ ವರ್ಮಾ ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬುಧವಾರವಷ್ಟೇ ಸಿಬಿಐ ನಿರ್ದೇಶಕ ಹುದ್ದೆಗೆ ಮರಳಿದ್ದ ಅಲೋಕ್ ವರ್ಮಾ ಅವರನ್ನು ಆಯ್ಕೆ ಸಮಿತಿ ಗುರವಾರ ವಜಾಗೊಳಿಸಿತ್ತು. ನಂತರ ಅವರಿಗೆಅಗ್ನಿ ಶಾಮಕ ಸೇವೆಗಳು ಮತ್ತು ಗೃಹ ರಕ್ಷಕ ದಳದ ಮಹಾ ನಿರ್ದೇಶಕರಾಗಿ ನೇಮಿಸಲಾಗಿತ್ತು.ಅವರು ಇದೇ 31ರಂದು ನಿವೃತ್ತರಾಗಲಿದ್ದಾರೆ.
ಇದನ್ನೂ ಓದಿ: ಕಚ್ಚಾಟಕ್ಕೆ ಅಲೋಕ್ ತಲೆದಂಡ
‘ಭ್ರಷ್ಟ ವ್ಯಕ್ತಿಯೊಬ್ಬರತಪ್ಪು, ನಿರಾಧಾರ ಮತ್ತು ತಿರುಳಿಲ್ಲದ ಆರೋಪಗಳ ಆಧಾರದ ಮೇಲೆ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ಅದು ಬೇಸರ ತಂದಿದೆ. ನ್ಯಾಯ ಮಾಯವಾಗಿದ್ದು, ಸಂಪೂರ್ಣಪ್ರಕ್ರಿಯೆ ತಲೆಕೆಳಗಾಗಿದೆ’ ಎಂದು ವರ್ಮಾ ಪ್ರತಿಕ್ರಿಯಿಸಿದ್ದಾರೆ.
‘ಸರ್ಕಾರ ಉನ್ನತ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನೂ ಬಯಲಿಗೆಳೆಯುವ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐಯ ಸ್ವಾತಂತ್ರ್ಯವನ್ನು ಕಾಪಾಡಬೇಕು ಮತ್ತು ರಕ್ಷಿಸಿಬೇಕು. ಹೊರಗಡೆಯ ಪ್ರಭಾವವಿಲ್ಲದಂತೆ ಕಾರ್ಯನಿರ್ವಹಿಸಬೇಕು. ಸಂಸ್ಥೆಯ ಘನತೆಯನ್ನು ಕಾಪಾಡಲು ನಾನು ಸಾಕಷ್ಟು ಪ್ರಯತ್ನಿಸಿದೆ’ ಎಂದು ಹೇಳಿದರು.
ವರ್ಮಾ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನಡುವೆ ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ಕಚ್ಚಾಟ ನಡೆದಿತ್ತು. ಈ ಇಬ್ಬರೂ ಪರಸ್ಪರರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರ ಪರಿಣಾಮವಾಗಿ 2018ರ ಅಕ್ಟೋಬರ್ 23ರಂದು ಅಲೋಕ್ ಅವರನ್ನು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳುಹಿಸಿತ್ತು.
ಸರ್ಕಾರದ ನಿರ್ಧಾರವನ್ನು ಅಲೋಕ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರವಷ್ಟೇ ರದ್ದು ಮಾಡಿತ್ತು. ಆದರೆ, ನೀತಿಗೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ನಿರ್ಬಂಧ ಹೇರಿತ್ತು. ಸಿಬಿಐ ನಿರ್ದೇಶಕ ಹುದ್ದೆಯಲ್ಲಿ ಅವರನ್ನು ಮುಂದುವರಿಸುವ ಸಂಬಂಧ ಆಯ್ಕೆ ಸಮಿತಿಯು ವಾರದೊಳಗಾಗಿ ನಿರ್ಧಾರ ಕೈಗೊಳ್ಳಬೇಕು ಎಂದುಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.