ನವದೆಹಲಿ: 30 ವರ್ಷಗಳ ಹಿಂದಿನ ‘ಪೊಲೀಸ್ ವಶದಲ್ಲಿದ್ದ ವ್ಯಕ್ತಿಯ ಸಾವು’ಪ್ರಕರಣಕ್ಕೆ ಸಂಬಂಧಿಸಿದಂತೆಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜಾಮ್‌ನಗರ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತೋರ್ವ ಅಧಿಕಾರಿ ಪ್ರವೀಣ್ ಸಿಂಗ್ ಝಾಲಾ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 11 ಹೆಚ್ಚುವರಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಭಟ್ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು. ಗುಜರಾತ್ ಪೊಲೀಸ್ ಪರ ವಕೀಲರು ಭಟ್ ಅವರ ನಡೆಯನ್ನು ವಿರೋಧಿಸಿ, ‘ಇದು ಪ್ರಕರಣದ ವಿಚಾರಣೆಯನ್ನು ನಿಧಾನಗೊಳಿಸುವ ತಂತ್ರ’ ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ:30 ವರ್ಷಗಳ ಹಳೆ ಪ್ರಕರಣ ವಿಚಾರಣೆಗೆ ಕೋರ್ಟ್ ನಕಾರ
ಘಟನೆ ನಡೆದಾಗ ಭಟ್ ಅವರು ಗುಜರಾತ್‌ನ ಜಾಮ್‌ನಗರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಸರ್ಕಾರಿ ವಕೀಲರ ಪ್ರಕಾರ, ಕೋಮು ಗಲಭೆ ನಡೆದಾಗ, ಭಟ್ ಅವರು ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಪೈಕಿ ಓರ್ವ ಬಂಧಿ ಬಿಡುಗಡೆಯಾದ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾಗಿರುವುದು, ಸರ್ಕಾರಿ ವಾಹನಗಳನ್ನು ಅಕ್ರಮವಾಗಿ ಬಳಸಿರುವ ಆರೋಪದ ಮೇಲೆ ಅವರನ್ನು 2011ರಲ್ಲಿ ಅಮಾನತು ಮಾಡಲಾಗಿತ್ತು. ಆಗಸ್ಟ್ 2015ರಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.