ನವದೆಹಲಿ:ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿ ಸಂಸದೆಪ್ರಜ್ಞಾ ಠಾಕೂರ್ ಲೋಕಸಭೆಯಲ್ಲಿ ದೇಶಭಕ್ತ ಎಂದು ಬುಧವಾರ ಹೇಳಿದ್ದಾರೆ. ಇದು ಕಲಾಪದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಕೂಡಲೇ ಸ್ಪೀಕರ್ ಓಂ ಬಿರ್ಲಾ ಅವರು ಆ ಪದವನ್ನು ಕಡತದಿಂದ ತೆಗೆದುಹಾಕಿದ್ದಾರೆ.
ಎಸ್‌ಪಿಜಿ ಕಾಯ್ದೆ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಚರ್ಚೆ ವೇಳೆ ಡಿಎಂಕೆ ಸಂಸದ ಎ.ರಾಜಾ ಅವರು, ಮಹಾತ್ಮ ಗಾಂಧಿ ಹತ್ಯೆಗೆ ಕಾರಣವೇನೆಂದು ಗೋಡ್ಸೆ ನೀಡಿದ್ದ ಹೇಳಿಕೆಯೊಂದನ್ನು ಉಲ್ಲೇಖಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರಜ್ಞಾ ಠಾಕೂರ್, ‘ದೇಶಭಕ್ತರೊಬ್ಬರ ಉದಾಹರಣೆಯನ್ನು ನೀವು ನೀಡುವಂತಿಲ್ಲ’ ಎಂದು ಹೇಳಿದರು.
‘32 ವರ್ಷಗಳಿಂದ ಗಾಂಧಿ ವಿರುದ್ಧ ದ್ವೇಷವಿತ್ತು ಎಂಬುದನ್ನು ಅವರನ್ನು ಹತ್ಯೆ ಮಾಡಲು ನಿರ್ಧರಿಸುವುದಕ್ಕೂ ಮುನ್ನ ಗೋಡ್ಸೆ ಒಪ್ಪಿಕೊಂಡಿದ್ದ. ನಿರ್ದಿಷ್ಟ ತತ್ವದಲ್ಲಿ ನಂಬಿಕೆ ಇರಿಸಿದ್ದರಿಂದಾಗಿ ಗಾಂಧಿಯವರನ್ನು ಗೋಡ್ಸೆ ಹತ್ಯೆ ಮಾಡಿದ್ದ’ ಎಂದು ರಾಜಾ ಹೇಳಿದರು. ಈ ವೇಳೆ ಪ್ರಜ್ಞಾ ಮಧ್ಯಪ್ರವೇಶಿಸಿದ್ದಕ್ಕೆ ಪ್ರತಿಪಕ್ಷಗಳ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಬಿಜೆಪಿ ಸಂಸದರು ಪ್ರಜ್ಞಾ ಮನವೊಲಿಸಿ ಕುಳಿತುಕೊಳ್ಳುವಂತೆ ಮಾಡಿದರು.
ಬಳಿಕ ಮಾತನಾಡಿದ ಸ್ಪೀಕರ್ಓಂ ಬಿರ್ಲಾ, ‘ರಾಜಾ ಹೇಳಿಕೆಯಷ್ಟನ್ನೇ ಕಡತಕ್ಕೆ ಸೇರಿಸಿದ್ದೇನೆ. ಪ್ರಜ್ಞಾ ಹೇಳಿಕೆಯನ್ನು ಸೇರಿಸುವುದಿಲ್ಲ’ ಎಂದು ಹೇಳಿದರು.
ಗೋಡ್ಸೆ ಕುರಿತ ಹೇಳಿಕೆಗಾಗಿ ಪ್ರಜ್ಞಾ ಕ್ಷಮೆ ಕೋರಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಆಗ್ರಹಿಸಿದೆ.
ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಗೋಡ್ಸೆಯನ್ನು ದೇಶಭಕ್ತ ಎಂದು ಪ್ರಜ್ಞಾ ಠಾಕೂರ್ ಹೊಗಳಿದ್ದರು. ಇದು ದೇಶದಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು. ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಸಹಪ್ರಜ್ಞಾರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.