ADVERTISEMENT

ನಿಕ್ಕಿ ಯಾದವ್‌ರನ್ನು 2020ರಲ್ಲೇ ಮದುವೆಯಾಗಿದ್ದ ಸಾಹಿಲ್‌: ಪೊಲೀಸರಿಂದ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2023, 10:20 IST
Last Updated 18 ಫೆಬ್ರುವರಿ 2023, 10:20 IST
ನಿಕ್ಕಿ ಯಾದವ್ ಮತ್ತು ಸಾಹಿಲ್‌ ಗೆಹಲೋತ್‌
ನಿಕ್ಕಿ ಯಾದವ್ ಮತ್ತು ಸಾಹಿಲ್‌ ಗೆಹಲೋತ್‌   

ನವದೆಹಲಿ: 23 ವರ್ಷದ ಯುವತಿ ನಿಕ್ಕಿ ಯಾದವ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯ ಬಗ್ಗೆ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

ನೈರುತ್ಯ ದೆಹಲಿಯಲ್ಲಿ ತನ್ನ ಸಹಜೀವನದ ಸಂಗಾತಿಯನ್ನು ಕೊಂದು, ಆಕೆಯ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟ ಆರೋಪಿ 24 ವರ್ಷದ ಸಾಹಿಲ್‌ ಗೆಹಲೋತ್‌ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

‘2020ರಲ್ಲಿ ನಿಕ್ಕಿ ಯಾದವ್‌ ಅವರನ್ನು ಸಾಹಿಲ್‌ ಗೆಹಲೋತ್‌ ಮದುವೆಯಾಗಿದ್ದ. ಮದುವೆಯ ಫೋಟೊಗಳು ಸಿಕ್ಕಿವೆ. ನಿಕ್ಕಿ ಯಾದವ್‌ರಿಂದ ಬೇರ್ಪಟ್ಟು ಬೇರೆ ಮಹಿಳೆಯೊಂದಿಗೆ ಮದುವೆಯಾಗಲು ಸಾಹಿಲ್ ಯೋಜನೆ ರೂಪಿಸಿದ್ದ. ತಾನು ಬೇರೊಬ್ಬ ಮಹಿಳೆಯ ಜತೆಗೆ ವಿವಾಹವಾಗುವ ವಿಷಯವನ್ನು ನಿಕ್ಕಿಯಿಂದ ಮುಚ್ಚಿಟ್ಟಿದ್ದ. ಮದುವೆ ವಿಚಾರವಾಗಿ ಮಹಿಳೆಯೊಂದಿಗೆ ಜಗಳವಾಡಿದ ಸಾಹಿಲ್, ಆದೇ ದಿನ ನಿಕ್ಕಿಯನ್ನು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಾಹಿಲ್‌ ಗೆಹಲೋತ್ ದೆಹಲಿಯ ಮಿತ್ರಾಂವ್ ಗ್ರಾಮದ ನಿವಾಸಿಯಾಗಿದ್ದು, ತನ್ನ ಗೆಳತಿ ನಿಕ್ಕಿ ಯಾದವ್‌ ಅವರನ್ನು ಕೊಂದು, ಶವವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಅಲ್ಲದೆ ಕೃತ್ಯ ಎಸಗಿದ ದಿನವೇ ಆತ ಮತ್ತೊಬ್ಬರೊಂದಿಗೆ ಮದುವೆಯಾಗಲು ಹೊರಟಿದ್ದ’ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ADVERTISEMENT

ಹೆಚ್ಚಿನ ವಿಚಾರಣೆಗೆ ಒಳಪಡಿಸಲು, ಕೊಲೆಯ ನಿಖರ ಸ್ಥಳ ಹಾಗೂ ಕೊಲೆಯ ಬಳಿಕ ಆತ ಅನುಸರಿಸಿದ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಆರೋಪಿಯನ್ನು ಐದು ದಿನಗಳವರೆಗೆ ದೆಹಲಿಯ ಅಪರಾಧ ವಿಭಾಗದ ಪೊಲೀಸರ ವಶಕ್ಕೆ ಒಪ್ಪಿಸಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅರ್ಚನಾ ಬೇನಿವಾಲ್‌ ಆದೇಶಿಸಿದ್ದಾರೆ.

‘ಆರೋಪಿಯು ತನ್ನ ಸಂಗಾತಿಯ ಜೊತೆಗೆ ಹೋದ ಸ್ಥಳಗಳನ್ನು ಪರಿಶೀಲಿಸಬೇಕಿದೆ. ಅಲ್ಲದೆ ಅಪರಾಧಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಬೇಕಿದೆ. ಅದಕ್ಕಾಗಿ ಆರೋಪಿಯನ್ನು ವಶಕ್ಕೆ ಒಪ್ಪಿಸುವಂತೆ’ ಪೊಲೀಸರು ಅರ್ಜಿಯಲ್ಲಿ ಕೋರಿದ್ದರು.

ಫೆಬ್ರುವರಿ 9ರ ಮಧ್ಯರಾತ್ರಿ ಕೊಲೆ: ‘ಸಾಹಿಲ್‌ ನಿಶ್ಚಿತಾರ್ಥ ಮತ್ತು ವಿವಾಹವಾಗುವ ವಿಷಯ ತಿಳಿದ ನಿಕ್ಕಿ, ಆತನನ್ನು ಫೆಬ್ರುವರಿ 9ರಂದು ಉತ್ತಮ್‌ ನಗರದಲ್ಲಿರುವ ತನ್ನ ಮನೆಗೆ ಬರುವಂತೆ ಕರೆ ಮಾಡಿ ಹೇಳಿದ್ದಾಳೆ. ಗೆಳತಿಯ ಮನೆಗೆ ಹೋದ ಆರೋಪಿಯು ತನ್ನ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೊರಗೆ ಹೋಗಿದ್ದಾನೆ. ಈ ವೇಳೆ, ಬೇರೊಬ್ಬರೊಂದಿಗೆ ವಿವಾಹವಾಗದಂತೆ ನಿಕ್ಕಿಯು ಸಾಹಿಲ್‌ ಮೇಲೆ ಒತ್ತಡ ಹೇರಿದ್ದಾಳೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

*ಕೋಚಿಂಗ್‌ ಸಂದರ್ಭದಲ್ಲಿ ಪರಿಚಯ*: ಎಸ್‌ಎಸ್‌ಸಿ ಪರೀಕ್ಷೆ ತಯಾರಿಗಾಗಿ ತಾನು 2018ರ ಜನವರಿಯಲ್ಲಿ ಉತ್ತಮ್‌ ನಗರದ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದೆ. ಹರಿಯಾಣದ ಜಜ್ಜರ್‌ನ ನಿವಾಸಿ ನಿಕ್ಕಿ ಯಾದವ್‌ ಅವರೂ ಉತ್ತಮ್‌ ನಗರದ ಸಂಸ್ಥೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು ಎಂದು ಸಾಹಿಲ್‌ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

‘ನಿಕ್ಕಿ ಮೊಬೈಲ್‌ನಲ್ಲಿದ್ದ ಚಾಟ್‌ ಅಳಿಸಿದ ಸಾಹಿಲ್‌’
‘ನಿಕ್ಕಿ ಯಾದವ್‌ ಹತ್ಯೆ ಮಾಡಿದ ನಂತರ, ಆಕೆಯ ಮೊಬೈಲ್‌ನಲ್ಲಿದ್ದ ಚಾಟ್‌ಗಳು ಹಾಗೂ ಡೇಟಾವನ್ನು ಆರೋಪಿ ಸಾಹಿಲ್‌ ಗೆಹಲೋತ್‌ ತೆಗೆದು ಹಾಕಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಿಕ್ಕಿ ಹತ್ಯೆ ಮಾಡುವುದಕ್ಕೂ 15 ದಿನಗಳ ಮೊದಲೇ ನಾನು ಉತ್ತಮನಗರದಲ್ಲಿರುವ ನಿಕ್ಕಿ ಮನೆಯನ್ನು ತೊರೆದಿದ್ದೆ. ಬೇರೆ ಯುವತಿ ಜೊತೆ ನನ್ನ ನಿಶ್ಚಿತಾರ್ಥ ನೆರವೇರಿದ ನಂತರ, ಫೆ. 9ರಂದು ನಾನು ಉತ್ತಮನಗರದ ಮನೆಗೆ ತೆರಳಿ, ನಿಕ್ಕಿ ಜೊತೆ ರಾತ್ರಿ ಕಳೆದೆ’ ಎಂಬುದಾಗಿ ಪೊಲೀಸರಿಗೆ ನೀಡಿರುವ ತಪ್ಪೊಪ್ಪಿಗೆಯಲ್ಲಿ ಸಾಹಿಲ್‌ ತಿಳಿಸಿದ್ದಾನೆ.

ಸಾಹಿಲ್‌ನ ಬಳಿಯಿದ್ದ ನಿಕ್ಕಿ ಮೊಬೈಲ್‌ ಅನ್ನು ಜಪ್ತಿ ಮಾಡಲಾಗಿದೆ. ಅದರಲ್ಲಿ ಮಾಹಿತಿಯನ್ನು ಮರಳಿ ಪಡೆಯುವ ಸಲುವಾಗಿ ಮೊಬೈಲ್‌ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.