ADVERTISEMENT

ಸಾಯಿಬಾಬಾ ಆರಾಧನೆಗೆ ಹಿಂದೂ ಸಂಘಟನೆಗಳ ಆಕ್ಷೇಪ; ವಾರಾಣಸಿಯಲ್ಲಿ ಮೂರ್ತಿಗಳ ತೆರವು

ಸಂಜಯ ಪಾಂಡೆ
Published 1 ಅಕ್ಟೋಬರ್ 2024, 14:49 IST
Last Updated 1 ಅಕ್ಟೋಬರ್ 2024, 14:49 IST
<div class="paragraphs"><p>ಸಾಯಿಬಾಬಾ ಮೂರ್ತಿ</p></div>

ಸಾಯಿಬಾಬಾ ಮೂರ್ತಿ

   

ಲಖನೌ: ದೇವಾಲಯಗಳಲ್ಲಿ ಸಾಯಿಬಾಬಾ ಪೂಜೆಗೆ ಕೇಸರಿ ಪಡೆಯ ಕೆಲ ಮುಖಂಡರು ಹಾಗೂ ಹಿಂದೂ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ವಾರಾಣಸಿಯ ಕೆಲ ದೇಗುಲಗಳಿಂದ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ.

ಲಖನೌದ ಪ್ರಸಿದ್ಧ ಬಡಾ ಗಣೇಶ ದೇವಸ್ಥಾನ ಸೇರಿದಂತೆ ಈವರೆಗೂ ಹತ್ತಕ್ಕೂ ಹೆಚ್ಚು ದೇವಾಲಯಗಳಿಂದ ಸಾಯಿಬಾಬಾ ಅವರ ಮೂರ್ತಿಯನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.

ADVERTISEMENT

ವಾರಾಣಸಿಯಲ್ಲಿನ ದೇಗುಲಗಳಲ್ಲಿರುವ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸುವಂತೆ ಸನಾತನ ರಕ್ಷಕ ದಳ ಹಾಗೂ ಬ್ರಾಹ್ಮಣ ಸಭಾ ಆಗ್ರಹಿಸಿದ್ದವು. 

‘ನಾವು ಸಾಯಿಬಾಬಾ ಅವರ ವಿರೋಧಿಗಳಲ್ಲ. ಆದರೆ ದೇಗುಲಗಳಲ್ಲಿ ಅವರ ಮೂರ್ತಿಗೆ ಜಾಗವಿಲ್ಲ’ ಎಂದು ಸನಾತನ ರಕ್ಷಕ ದಳದ ಅಧ್ಯಕ್ಷ ಅಜಯ್ ಶರ್ಮಾ ಹೇಳಿದ್ದಾರೆ.

‘ಸಾಯಿಬಾಬಾ ಅನುಯಾಯಿಗಳು ಅವರಿಗಾಗಿಯೇ ಗುಡಿ ನಿರ್ಮಿಸಿ, ಅಲ್ಲಿಯೇ ಪೂಜಿಸಲಿ. ಸನಾತನ ಧರ್ಮದಲ್ಲಿ ಅವರ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ. ಸನಾತನ ಧರ್ಮದ ದೇಗುಲಗಳಲ್ಲಿ ಐದು ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಪೂಜೆಗಷ್ಟೇ ಅವಕಾಶವಿದೆ. ಇದರಲ್ಲಿ ಸೂರ್ಯ, ವಿಷ್ಣು, ಶಿವ, ಶಕ್ತಿ ಹಾಗೂ ಗಣೇಶ ಮೂರ್ತಿಗಳ ಆರಾಧನೆಗಷ್ಟೇ ಅವಕಾಶ’ ಎಂದಿದ್ದಾರೆ.

‘ಭೂತೇಶ್ವರ ಹಾಗೂ ಅಗಸ್ತೇಶ್ವರ ದೇಗುಲಗಳಲ್ಲಿರುವ ಸಾಯಿಬಾಬಾ ಮೂರ್ತಿಗಳನ್ನು ಮುಂದಿನ ವಾರದೊಳಗೆ ತೆರವುಗೊಳಿಸಲಾಗುವುದು’ ಎಂದು ಶರ್ಮಾ ಹೇಳಿದ್ದಾರೆ.

‘ಸಾಯಿಬಾಬಾ ಹಿಂದೂ ದೇವರಲ್ಲ. ಪ್ರಾಚೀನ ಪುರಾಣಗಳಲ್ಲಿ ಸಾಯಿಬಾಬಾ ಅವರ ಉಲ್ಲೇಖವಿಲ್ಲ’ ಎಂದು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

‘ಸಾಯಿಬಾಬಾ ಅವರನ್ನು ‘ಮಹಾತ್ಮ’ ಎಂದು ಕರೆಯಬಹುದೇ ಹೊರತು, ದೇವರೆಂದಲ್ಲ’ ಎಂದು ಭಗೇಶ್ವರ ಧಾಮದ ಆಚಾರ್ಯ ಧೀರೇಂದ್ರ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಖಂಡಿಸಿರುವ ಸಮಾಜವಾದಿ ಪಕ್ಷದ ಮುಖಂಡ ಆಶುತೋಷ ಸಿನ್ಹಾ, ‘ಸಾಯಿಬಾಬಾ ಅವರ ಮೂರ್ತಿ ತೆರವು ಬಿಜೆಪಿಯ ರಾಜಕೀಯ ತಂತ್ರದ ಭಾಗವಾಗಿದೆ. ಮಹಾರಾಷ್ಟ್ರದಲ್ಲಿ ಸಾಯಿಬಾಬಾ ಅವರನ್ನು ವ್ಯಾಪಕವಾಗಿ ಪೂಜಿಸಲಾಗುತ್ತದೆ. ಹಿಂದೂ ಧರ್ಮ ಎಂದರೆ ಎಲ್ಲವನ್ನೂ ಒಳಗೊಳ್ಳುವ ಗುಣ ಹೊಂದಿದೆ. ಶತಮಾನಗಳಿಂದ ಬಹಳಷ್ಟು ನಂಬಿಕೆಗಳನ್ನು ಇದು ಒಳಗೊಂಡಿದೆ’ ಎಂದಿದ್ದಾರೆ.

‘ರಾಜಕೀಯ ಲಾಭದ ಉದ್ದೇಶ’
‘ಸಾಯಿಬಾಬಾ ಪ್ರತಿಮೆ ತೆರವು ಅಭಿಯಾನದ ಹಿಂದೆ ಬಿಜೆಪಿಯ ರಾಜಕೀಯ ಲಾಭದ ಉದ್ದೇಶ ಅಡಗಿದೆ’ ಎಂದು ಸಮಾಜವಾದಿ ಪಕ್ಷದ ಮುಖಂಡ ಆಶುತೋಷ್ ಸಿನ್ಹಾ ಆರೋಪಿಸಿದ್ದಾರೆ. ‘ಸಾಯಿಬಾಬಾ ಅವರನ್ನು ಮಹಾರಾಷ್ಟ್ರದಾದ್ಯಂತ ಗೌರವಿಸಲಾಗು ತ್ತದೆ. ಹಿಂದೂ ಧರ್ಮವು ಎಲ್ಲರನ್ನೂ ಒಳಗೊಳ್ಳುವ ಧರ್ಮವಾಗಿದ್ದು, ಶತಮಾನಗಳಿಂದ ವಿವಿಧ ಚಿಂತನೆಗಳನ್ನು ಒಪ್ಪಿಕೊಂಡಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.