ADVERTISEMENT

ಸಿಖ್‌ ವಿರೋಧಿ ದಂಗೆ: ಸಜ್ಜನ್‌ ಕುಮಾರ್‌ಗೆ ಜೀವಾವಧಿ

ಏಜೆನ್ಸೀಸ್
Published 17 ಡಿಸೆಂಬರ್ 2018, 7:36 IST
Last Updated 17 ಡಿಸೆಂಬರ್ 2018, 7:36 IST
ಸಜ್ಜನ್‌ ಕುಮಾರ್‌ –ಸಂಗ್ರಹ ಚಿತ್ರ
ಸಜ್ಜನ್‌ ಕುಮಾರ್‌ –ಸಂಗ್ರಹ ಚಿತ್ರ   

ನವದೆಹಲಿ: 1984ರ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಸಜ್ಜನ್‌ ಕುಮಾರ್‌ಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ಸೋಮವಾರ ತೀರ್ಪು ನೀಡಿದೆ.

ಈ ಮೊದಲು ದೆಹಲಿ ಜಿಲ್ಲಾ ನ್ಯಾಯಾಲಯ ಈ ಪ್ರಕರಣದಿಂದ ಸಜ್ಜನ್‌ ಅವರು ಖುಲಾಸೆಗೊಳಿಸಿತ್ತು. ಆ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದ್ದು, ಡಿಸೆಂಬರ್‌ 31ರೊಳಗೆ ಸಜ್ಜನ್‌ ನ್ಯಾಯಾಲಯಕ್ಕೆ ಶರಣಾಗಬೇಕೆಂದು ನಿರ್ದೇಶಿಸಿದೆ. ಅಲ್ಲದೆ,ನಗರಬಿಟ್ಟು ಹೊರಗೆ ಹೋಗದಂತೆಸೂಚಿಸಿದೆ.

ಎಸ್‌.ಮುರಳೀಧರ್‌ ಮತ್ತು ವಿನೋದ್‌ ಗೋಯೆಲ್ ಅವರನ್ನೊಳಗೊಂಡಿದ್ದ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ’ಸತ್ಯಕ್ಕೆ ಗೆಲುವಾಗಲಿದೆ ಮತ್ತು ಎಂದಿಗೂ ನ್ಯಾಯ ಉಳಿಯಲಿದೆ’ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕ 1984 ಅಕ್ಟೋಬರ್ 31ರಂದು ಹತ್ಯೆ ಮಾಡಿದ ನಂತರ ಸಿಖ್ ವಿರೋಧಿ ದಂಗೆ ಶುರುವಾಗಿತ್ತು.ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಒಟ್ಟು 3,325 ಸಂತ್ರಸ್ತರ ಪೈಕಿ ದೆಹಲಿಯೊಂದರಲ್ಲೇ 2,733 ಮಂದಿ ಬಲಿಯಾಗಿದ್ದರು.

ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ ಗಲಭೆಯಲ್ಲಿ ಐವರನ್ನು ಹತ್ಯೆ ಮಾಡಿದ್ದ ಆರೋಪ ಸಜ್ಜನ್‌ ಕುಮಾರ್‌ (73) ಮೇಲಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಜಿಲ್ಲಾ ನ್ಯಾಯಾಲಯ 2013ರ ಏಪ್ರಿಲ್‌ 30ರಂದು ಆರೋಪಿಗಳ ಪಟ್ಟಿಯಿಂದ ಸಜ್ಜನ್‌ ಅವರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ವಿರೋಧಿಸಿ2013ರ ಮೇ 7ರಂದು ಸಿಬಿಐ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿತ್ತು.

ಈ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಇತರೆ ಐವರು ಆರೋಪಿಗಳಾಗಿದ್ದ ಮಾಜಿ ಕಾರ್ಪೊರೇಟರ್ ಬಲವಾನ್ ಖೊಕ್ಕರ್, ಮಾಜಿ ಶಾಸಕ ಮಹೇಂದ್ರ ಯಾದವ್, ಗಿರ್ಧಾರಿ ಲಾಲ್, ಕಿಶನ್ ಖೊಕ್ಕರ್ ಹಾಗೂ ಕ್ಯಾಪ್ಟನ್ ಭಾಗ್‌ಮಲ್ ತಮ್ಮ ವಿರುದ್ಧ ನೀಡಿರುವ ಶಿಕ್ಷೆಯನ್ನು ರದ್ದುಗೊಳಿಸಿಲು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಬಲವಾನ್,ಭಾಗ್‌ಮಲ್ ಮತ್ತುಗಿರ್ಧಾರಿ ಲಾಲ್‌ಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿಹಿಡಿದಿದ್ದು, ಯಾದವ್‌ ಹಾಗೂ ಕಿಶನ್ ಖೊಕ್ಕರ್ ಜೈಲು ಶಿಕ್ಷೆಯ ಅವಧಿಯನ್ನು ಇನ್ನೂ 10 ವರ್ಷಕ್ಕೆ ವಿಸ್ತರಿಸಿದೆ.

ಮರು ತನಿಖೆ

ಸಿಖ್ ವಿರೋಧಿ ದಂಗೆ ಪ್ರಕರಣಗಳ ಮರುತನಿಖೆಗೆ ಹೊಸದಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಸುಪ್ರೀಂಕೋರ್ಟ್‌ ಇದೇ ಜನವರಿಯಲ್ಲಿ ಹೇಳಿತ್ತು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಒಟ್ಟು 186 ಪ್ರಕರಣಗಳ ಮರು ತನಿಖೆಯಾಗಲಿದೆ.

ತೀರ್ಪು ಸ್ವಾಗತಿಸಿದ ಪಂಜಾಬ್‌ ಕಾಂಗ್ರೆಸ್‌ ಸಮಿತಿ

ಸಜ್ಜನ್‌ ವಿರುದ್ಧ ನೀಡಿದ ದೆಹಲಿ ಹೈಕೋರ್ಟ್‌ ತೀರ್ಪನ್ನುಪಂಜಾಬ್‌ ಕಾಂಗ್ರೆಸ್‌ ಸಮಿತಿ, ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿ ಸ್ವಾಗತಿಸಿದೆ.

ಪಂಜಾಬ್‌ ಕಾಂಗ್ರೆಸ್‌ ಸಮತಿಯ ಅಧ್ಯಕ್ಷ ಸುನೀಲ್‌ ಕುಮಾರ್, ’ಸಿಖ್‌ ವಿರೋಧಿ ದಂಗೆಗೆ ಕಾರಣಕರ್ತರಾದ ಎಲ್ಲರಿಗೂ ಶಿಕ್ಷೆಯಾಗಬೇಕು. ಈಬಗ್ಗೆ ಪಕ್ಷ ಸ್ಪಷ್ಟವಾಗಿದೆ. ನ್ಯಾಯ ಸಿಗಲು ಬಹಳ ತಡವಾಗಿದ್ದರೂ ಅಂತಿಮವಾಗಿ ಸಿಕ್ಕಿದೆ. ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಇಂತಹ ಹೀನ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಲ್ಲರಿಗೂ ಶಿಕ್ಷೆಯಾಗಲೇ ಬೇಕು‘ ಎಂದು ತಿಳಿಸಿದರು.

’ಮಧ್ಯಪ್ರದೇಶ ಕಾಂಗ್ರೆಸ್‌ ಮುಖಂಡ ಕಮಲ್‌ನಾಥ್‌ ಅವರ ಹೆಸರು ದಂಗೆಯ ಆರೋಪಿಗಳಪಟ್ಟಿಯಲ್ಲಿ ಎಂದಿಗೂ ಇಲ್ಲ‘ ಎಂದೂ ಅವರು ಹೇಳಿದರು.

ಸಿಖ್ ವಿರೋಧಿ ದೊಂಬಿಯಲ್ಲಿ ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ ಶಾಮೀಲಾಗಿದ್ದು, ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿರುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಿಜೆಪಿ ವಕ್ತಾರ ತೇಜಿಂದರ್‌ ಪಾಲ್‌ ಸಿಂಗ್‌ ಬಗ್ಗಾ, ’ಸಜ್ಜನ್‌ ಕುಮಾರ್‌ಗೆ ಮರಣದಂಡನೆ ವಿಧಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.