ADVERTISEMENT

ಯೋಧನ ಅಂತಿಮಯಾತ್ರೆ ವೇಳೆ ನಗುತ್ತಾ ಕೈಬೀಸಿದ ಬಿಜೆಪಿ ಸಂಸದ: ಟ್ವಿಟರಿಗರಿಂದ ತರಾಟೆ

ಸಾಕ್ಷಿ ಮಹಾರಾಜ್‌ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 10:30 IST
Last Updated 18 ಫೆಬ್ರುವರಿ 2019, 10:30 IST
   

ಲಖನೌ: ಪುಲ್ವಾಮಾ ದಾಳಿಯ ಹುತಾತ್ಮ ಅಜಿತ್ ಕುಮಾರ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಉನ್ನಾವೊದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನಗುತ್ತಾ ಜನರತ್ತ ಕೈಬೀಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಅಜಿತ್‌ ಕುಮಾರ್ ಪಾರ್ಥಿವ ಶರೀರವನ್ನು ಶನಿವಾರ ಬೆಳಿಗ್ಗೆ ಉನ್ನಾವೊದಲ್ಲಿರುವ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ನಡೆದ ಅಂತಿಮ ಯಾತ್ರೆಯ ವೇಳೆ ಸಾಕ್ಷಿ ಮಹಾರಾಜ್ ಅವರು ನೆರೆದಿದ್ದ ಜನರತ್ತ ನಗುತ್ತಾ ಕೈಬೀಸಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಾಕ್ಷಿ ಮಹಾರಾಜ್‌ ನಗುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ‘ಇವರಿಗೆ ನಾಚಿಕೆ ಎನಿಸುವುದಿಲ್ಲವೇ’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಹುತಾತ್ಮನ ಅಂತಿಮಯಾತ್ರೆ ವೇಳೆ ಟ್ರಕ್‌ನಲ್ಲಿ ನಿಂತಿರುವ ಬಿಜೆಪಿ ಸಂಸದರು ನಗಾಡುತ್ತಿದ್ದಾರೆ. @BJP4India ನಿಮಗೆ ನಾಚಿಕೆಯಾಗಬೇಕು’ ಎಂದು ಡಾ. ರಾಮ್‌ ಪುನಿಯಾನಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಪುಲ್ವಾಮಾ ದಾಳಿಯನ್ನು ಸಂಭ್ರಮಿಸುತ್ತಿರುವಂತಿದೆ ಎಂದು ಪ್ರಶಾಂತ್ ಕನೊಜಿಯಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ರಾಜಕೀಯ ಅಸಹ್ಯ ಹುಟ್ಟಿಸಿದೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಅವರು ಸಿಧು ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು, ಆದರೆ ಸಾಕ್ಷಿ ಮಹಾರಾಜ್ ಮಾಡಿದ್ದು ಅದಕ್ಕಿಂತಲೂ ಸಾವಿರ ಪಟ್ಟು ಕೆಟ್ಟ ಕೆಲಸ. ಇದು ಬಿಜೆಪಿಯ ರೋಡ್‌ಶೋ ಅಲ್ಲ. ಹುತಾತ್ಮ ಯೋಧನ ಅಂತಿಮಯಾತ್ರೆ ಎಂಬುದನ್ನು ಸಾಕ್ಷಿ ಮಹಾರಾಜ್‌ಗೆ ತಿಳಿಸಬೇಕು’ ಎಂದು ಸತೀಶ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಗಮನ ಸೆಳೆಯದಲು ಇದೊಂದು ಮಾರ್ಗ. ಸಾಕ್ಷಿ ಮಹಾರಾಜ್‌ಗೆ ಮತ ನೀಡಿರುವ ಜನರು ಅವರಿಂದ ರಾಜೀನಾಮೆ ಕೊಡಿಸಬೇಕು’ ಎಂದು ಪಿಮೆಂಟೊ ಜೋಸೆಫ್ ಟ್ವೀಟ್ ಮಾಡಿದ್ದಾರೆ.

ಇನ್ನೂ ಅನೇಕರು ಸಾಕ್ಷಿ ಮಹರಾಜ್ ಅವರ ಚಿತ್ರ, ವಿಡಿಯೊವನ್ನು ಟ್ವೀಟ್ ಮಾಡಿ ಪ್ರತಿರೋಧ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.