ಸೇಲಂ: ತಾನು ಸತ್ತರೆ ತನ್ನ ಮಗನಿಗೆ ಕಾಲೇಜು ಫೀ (ಶುಲ್ಕ) ಕಟ್ಟಲು ಪರಿಹಾರ ಹಣ ಸಿಗುತ್ತದೆ ಎಂದು ನಂಬಿ, ತಾಯಿಯೊಬ್ಬಳು ಚಲಿಸುತ್ತಿದ್ದ ಬಸ್‌ಗೆ ಅಡ್ಡ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 28 ರಂದು ಸೇಲಂನ ಅಗ್ರಹಾರ ರಸ್ತೆಯಲ್ಲಿ ಬಸ್ ಗುದ್ದಿ ಮಹಿಳೆಯೊಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಪಾಪತಿ ಎಂಬ 46 ವರ್ಷದ ಮಹಿಳೆ ಮೃತಪಟ್ಟಿದ್ದರು. ಪಾಪತಿ ಸೇಲಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದರು.
ಈ ಘಟನೆ ಕುರಿತು ಪೊಲೀಸರು ವಿಸ್ತೃತ ತನಿಖೆ ನಡೆಸಿದಾಗ ಹಾಗೂ ಸ್ಥಳದಲ್ಲಿಯ ಸಿಸಿಟಿವಿ ಪುರಾವೆಗಳನ್ನು ಗಮನಿಸಿ ಇದೊಂದು ಆತ್ಮಹತ್ಯೆ ಎಂದು ಹೇಳಿರುವುದಾಗಿ ನ್ಯೂಸ್9ಲೈವ್ ವೆಬ್‌ಸೈಟ್ ವರದಿ ಮಾಡಿದೆ.
ಈ ಬಗ್ಗೆ ಪೊಲೀಸರ ಹೇಳಿಕೆ ಉಲ್ಲೇಖಿಸಿ ಟ್ವಿಟರ್‌ನಲ್ಲೂ ಅನೇಕರು ಇದೊಂದು ಆತಂಕಕಾರಿ ಘಟನೆ ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಾಪತಿ ಅವರ ಮಗ ಸೇಲಂನ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದಾರೆ. ಕಾಲೇಜಿನ ₹ 45,000 ಶುಲ್ಕ ಕಟ್ಟಲು ಬ್ಯಾಂಕ್ ಒಂದಕ್ಕೆ ಅವರು ಸಾಲದ ಅರ್ಜಿ ಸಲ್ಲಿಸಿದ್ದರು. ಆದರೆ ಸಾಲಕ್ಕೆ ಬ್ಯಾಂಕ್ ನಿರಾಕರಿಸಿತ್ತು. ಅಪಘಾತದಲ್ಲಿ ಮೃತಪಟ್ಟರೇ ಪರಿಹಾರ ಹಣ ಸಿಗುತ್ತದೆ ಎಂದು ಯಾರೋ ಹೇಳಿದ ಮಾತನ್ನು ನಂಬಿದ್ದ ಪಾಪತಿ ಅವರು ಚಲಿಸುವ ಬಸ್‌ನ ಎದುರು ಅಡ್ಡ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಬಗ್ಗೆ ಅನೇಕರು ಮರುಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.