ADVERTISEMENT

ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ: ತಾಪಿ ನದಿಯಲ್ಲಿ 2 ಪಿಸ್ತೂಲ್ ಪತ್ತೆ

ಪಿಟಿಐ
Published 23 ಏಪ್ರಿಲ್ 2024, 9:47 IST
Last Updated 23 ಏಪ್ರಿಲ್ 2024, 9:47 IST
<div class="paragraphs"><p>ಗುಜರಾತ್‌ನ ತಾಪಿ ನದಿಯಲ್ಲಿ&nbsp; ಕಾರ್ಯಾಚರಣೆ&nbsp;</p></div>

ಗುಜರಾತ್‌ನ ತಾಪಿ ನದಿಯಲ್ಲಿ  ಕಾರ್ಯಾಚರಣೆ 

   

(ಪಿಟಿಐ ಚಿತ್ರ)

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದಿದ್ದ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳು ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚುವಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗ ಯಶಸ್ವಿಯಾಗಿದೆ.

ADVERTISEMENT

ಗುಜರಾತ್‌ನ ತಾಪಿ ನದಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಸ್ತೂಲ್, ಮ್ಯಾಗಜೀನ್ ಮತ್ತು ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಆರಂಭವಾದ ಶೋಧದ ವೇಳೆ ಅಪರಾಧ ವಿಭಾಗದ ಅಧಿಕಾರಿಗಳು 2 ಪಿಸ್ತೂಲ್‌ಗಳು , ಮೂರು ಮ್ಯಾಗಜೀನ್‌ಗಳು ಮತ್ತು 13 ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಎನ್‌ಕೌಂಟರ್ ಸ್ಪೆಷಲಿಸ್ಟ್, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಸೇರಿದಂತೆ 12 ಅಧಿಕಾರಿಗಳ ತಂಡ ಇನ್ನೂ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಕೂಬಾ ಡೈವರ್‌ಗಳ ಸಹಾಯದಿಂದ ಶೋಧ ಕಾರ್ಯ ನಡೆಯುತ್ತಿದೆ.

ಏಪ್ರಿಲ್‌ 14ರ (ಭಾನುವಾರ) ಮುಂಜಾನೆ 5 ಗಂಟೆ ವೇಳೆಗೆ ಎರಡು ಬೈಕ್‌ಗಳಲ್ಲಿ ಬಂದ ಇಬ್ಬರು ಆರೋಪಿಗಳು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಎದುರು ನಾಲ್ಕು ಸುತ್ತು ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದರು.

ಪ್ರಕರಣ ಸಂಬಂಧ ಏಪ್ರಿಲ್ 16 ರಂದು ಮುಂಬೈ ಮತ್ತು ಕಚ್ ಪೊಲೀಸರ ಜಂಟಿ ತಂಡಗಳು ಆರೋಪಿಗಳಾದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ರನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಿದ್ದರು. ಬಳಿಕ ಅವರನ್ನು ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ತಾಪಿ ನದಿಯಲ್ಲಿ ಪಿಸ್ತೂಲ್‌ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು.

ಈ ದಾಳಿಯಲ್ಲಿ ತಮ್ಮ ಕೈವಾಡವಿದೆ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹೇಳಿಕೊಂಡಿದ್ದ. ಈ ಬಗ್ಗೆ ಆತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.