ನವದೆಹಲಿ: ಭಾರತದಲ್ಲಿ ಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವುದನ್ನು ನೋಡಿ ಬಹಳ ಚಿಂತಿತನಾಗಿದ್ದೇನೆ ಎಂದು ರಾಮ ಮಂದಿರದ ಕುರಿತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಪ್ರತಿಕ್ರಿಯಿಸಿದ್ದಾರೆ.
10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿರುವವರು ಪತ್ರಿಕಾಗೋಷ್ಠಿ ಮಾಡದೇ ಇರುವುದು ನನ್ನನ್ನು ಕಾಡುತ್ತಿದೆ. ಒಂದು ರಾಷ್ಟ್ರೀಯ ಕ್ರೀಡಾಂಗಣಕ್ಕೆ ತಾವು ಬದುಕಿರುವಾಗಲೇ ತಮ್ಮ ಹೆಸರನ್ನಿಡಲು ಅನುಮತಿ ನೀಡಿರುವ ಪ್ರಧಾನಿಯ ನಡವಳಿಕೆ ನನ್ನನ್ನು ಕಾಡುತ್ತಿದೆ. ಇದರಿಂದ ನಾವು ತಪ್ಪು ದಾರಿಯಲ್ಲಿ ನಡೆಯುತ್ತಿರುವ ಸೂಚನೆ ನನಗೆ ಸಿಗುತ್ತಿದೆ. ಇಡೀ ದೇಶ ರಾಮಮಂದಿರದ ವಿಷಯದಲ್ಲಿ ಮುಳುಗಿರುವುದು ನನ್ನನ್ನು ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ನನ್ನ ಪ್ರಕಾರ ಧರ್ಮವು ವೈಯಕ್ತಿಕ ವಿಷಯವಾಗಿದೆ, ಅದನ್ನು ರಾಷ್ಟ್ರೀಯ ಅಜೆಂಡಾ ಎಂಬಂತೆ ಗೊಂದಲ ಸೃಷ್ಟಿಸಬೇಡಿ. ಶಿಕ್ಷಣ, ಉದ್ಯೋಗ, ಬೆಳವಣಿಗೆ, ಆರ್ಥಿಕತೆ, ಹಣದುಬ್ಬರ, ಆರೋಗ್ಯ, ಪರಿಸರ ರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ರಾಷ್ಟ್ರೀಯ ಅಜೆಂಡಾವಾಗಿರಬೇಕು. ನೀವು ಯಾವ ಧರ್ಮವನ್ನು ಅನುಸರಿಸುತ್ತೀರಿ ಎಂಬುದು ಮುಖ್ಯವಾಗಬಾರದು ಎಂದಿದ್ದಾರೆ.
ನೀವು ಏನನ್ನು ತಿನ್ನಬೇಕು ಅಥವಾ ಯಾವ ಧರ್ಮಪಾಲಿಸಬೇಕು ಎಂಬುದನ್ನು ಹೇರಲು ಬರುವುದಿಲ್ಲ. ಅದು ವೈಯಕ್ತಿಕ ಸ್ವಾತಂತ್ರ್ಯ. ಇಡೀ ದೇಶವು ರಾಮ ಮಂದಿರ ಮತ್ತು ರಾಮ ಜನ್ಮಭೂಮಿಯ ಮೇಲೆ ದೃಷ್ಟಿ ನೆಟ್ಟಿರುವುದು ಖಂಡಿತಾ ಅಸಮಾಧಾನ ತಂದಿದೆ ಮತ್ತು ನನ್ನನ್ನು ಬಹಳವಾಗಿ ಕಾಡುತ್ತಿದೆ .ಧರ್ಮವು ತೀರಾ ವೈಯಕ್ತಿಕ ವಿಷಯವಾಗಿದೆ. ಅದನ್ನು ರಾಷ್ಟ್ರೀಕರಣ ಮಾಡಬೇಡಿ. ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ. ಪ್ರಧಾನಿಯೊಬ್ಬರು ನಿತ್ಯ ದೇವಸ್ಥಾನಗಳಲ್ಲಿ ಕಾಲ ಕಳೆಯುತ್ತಿರುವುದು ನನ್ನನ್ನು ಕಾಡುತ್ತಿದೆ. ಪ್ರಧಾನಿ ದೇವಾಲಯ ಸುತ್ತುವುದನ್ನು ನಿಲ್ಲಿಸಿ ಶಾಲೆಗಳು, ಗ್ರಂಥಾಲಯಗಳು ಮತ್ತು ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಪಿತ್ರೋಡಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.