ADVERTISEMENT

ಪಿತ್ರೊಡಾ ಮರುನೇಮಕ; ಭಾರತೀಯರ ಕುರಿತ ಹೇಳಿಕೆಗೆ ಕಾಂಗ್ರೆಸ್ ಸಮರ್ಥನೆ: BJP ಆರೋಪ

ಪಿಟಿಐ
Published 27 ಜೂನ್ 2024, 14:49 IST
Last Updated 27 ಜೂನ್ 2024, 14:49 IST
<div class="paragraphs"><p>ಶೆಹಝಾದ್ ಪೂನಾವಾಲಾ, ಸ್ಯಾಮ್ ಪಿತ್ರೊಡಾ</p></div>

ಶೆಹಝಾದ್ ಪೂನಾವಾಲಾ, ಸ್ಯಾಮ್ ಪಿತ್ರೊಡಾ

   

ನವದೆಹಲಿ: ಪಕ್ಷದ ಸಾಗರೋತ್ತರ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೊಡಾ ಅವರನ್ನು ಮರುನೇಮಕ ಮಾಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಅವರು ಭಾರತೀಯರ ಕುರಿತು ನೀಡಿದ ಅಸಂಬದ್ಧ ಹೇಳಿಕೆಗಳನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲಾ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘1986ರ ಸಿಖ್ ವಿರೋಧಿ ಧಂಗೆ, ಪುಲ್ವಾಮಾ ಭಯೋತ್ಪಾದಕರ ದಾಳಿ ಹಾಗೂ ಭಾರತೀಯರ ರೂಪದ ಬಗ್ಗೆ ಅವರು ಹೇಳಿಕೆ ನೀಡಿದ್ದರು. ಆಗ ಅವರ ರಾಜೀನಾಮೆ ಅಂಗೀಕರಿಸಿದ ಕಾಂಗ್ರೆಸ್, ಚುನಾವಣೆ ನಂತರ ಮರು ನೇಮಕ ಮಾಡಿದೆ. ಆ ಮೂಲಕ ಜನರನ್ನು ಮೂರ್ಖರನ್ನಾಗಿಸಿ, ದಿಕ್ಕು ತಪ್ಪಿಸಿದೆ’ ಎಂದಿದ್ದಾರೆ.

ADVERTISEMENT

ಪಿತ್ರೊಡಾ ಅವರನ್ನು ಪಕ್ಷದ ಸಾಗರೋತ್ತರ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಆದೇಶಿಸಿದ್ದರು. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ರಾಹುಲ್ ಅವರು ವಿರೋಧ ಪಕ್ಷದ ನಾಯಕರಾದರು. ತಮ್ಮ ಗುರು, ಮಾರ್ಗದರ್ಶಕರೂ ಆಗಿರುವ ಪಿತ್ರೊಡಾ ಅವರನ್ನು ಅವರು ಹಿಂದೆ ಇದ್ದ ಹುದ್ದೆಗೆ ಮರು ನೇಮಕ ಮಾಡಿದ್ದಾರೆ. ಆ ಮೂಲಕ ಭಾರತೀಯರು, ಭಗವಾನ್ ರಾಮ, ರಾಮ ನವಮಿ, ಸಿಖ್ ಹತ್ಯೆ, ಪುಲ್ವಾಮಾ ಭಯೋತ್ಪಾದಕರ ದಾಳಿ ಕುರಿತು ಈ ಹಿಂದೆ ಪಿತ್ರೊಡಾ ನೀಡಿರುವ ಎಲ್ಲಾ ಹೇಳಿಕೆಗಳನ್ನೂ ಕಾಂಗ್ರೆಸ್‌ ಸಮರ್ಥಿಸಿಕೊಂಡಂತಾಗಿದೆ’ ಎಂದು ಪೂನಾವಾಲಾ ಹೇಳಿದ್ದಾರೆ.

‘ಚುನಾವಣೆಯ ಸಂದರ್ಭದಲ್ಲಿ ಪಿತ್ರೊಡಾ ಹಾಗೂ ಅವರ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್‌ನ ನಡೆ ಕೇವಲ ಜನರ ದಿಕ್ಕನ್ನು ಬದಲಿಸಿ ಅವರನ್ನು ಮೂರ್ಖರನ್ನಾಗಿಸುವುದಾಗಿತ್ತು. ಪಕ್ಷಕ್ಕೂ ಪಿತ್ರೊಡಾ ಹೇಳಿಕೆ ರಾಜಕೀಯವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಕಾರಣ ಆಗ ಅಂತರ ಕಾಯ್ದುಕೊಳ್ಳುವ ನಾಟಕವಾಡಿತು’ ಎಂದು ಆರೋಪಿಸಿದ್ದಾರೆ.

ದೇಶದ ಈಶಾನ್ಯ ರಾಜ್ಯಗಳ ಜನರನ್ನು ಚೀನೀಯರಿಗೆ, ದಕ್ಷಿಣ ಭಾಗದ ಜನರನ್ನು ಆಫ್ರಿಕನ್ನರಿಗೆ, ಪಶ್ಚಿಮ ಭಾಗದ ಜನರನ್ನು ಅರಬ್ಬರಿಗೆ, ಉತ್ತರ ಭಾರತೀಯರನ್ನು ಶ್ವೇತವರ್ಣೀಯರಿಗೆ ಪಿತ್ರೊಡಾ ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. 2019ರ ಚುನಾವಣೆ ಸಂದರ್ಭದಲ್ಲಿ ಪುಲ್ವಾಮಾ ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಪಿತ್ರೊಡಾ, ‘ಇದು ಎಲ್ಲಾ ಸಮಯದಲ್ಲೂ ನಡೆಯುತ್ತದೆ’ ಎಂದಿದ್ದರು. 1984ರ ಸಿಖ್ ಧಂಗೆ ಕುರಿತು  ಹೇಳಿಕೆ ನೀಡಿದ್ದ ಇವರು, ‘ಏನು ಆಯಿತೋ ಅದು ನಡೆದುಹೋಗಿದೆ’ ಎಂದು ಹೇಳಿದ್ದರು. ಈ ಹೇಳಿಕೆಗಳು ಆಯಾ ಕಾಲಕ್ಕೆ ವಿವಾದ ಸೃಷ್ಟಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.