ADVERTISEMENT

ಮತಗಟ್ಟೆ ಬಳಿ ಗುರುತು ಪರಿಶೀಲನೆಗಾಗಿ ಬುರ್ಖಾಧಾರಿಗಳ ಮುಸುಕು ತೆಗೆಸದಿರಿ: ಎಸ್‌ಪಿ

ಪಿಟಿಐ
Published 20 ನವೆಂಬರ್ 2024, 2:33 IST
Last Updated 20 ನವೆಂಬರ್ 2024, 2:33 IST
   

ಲಖನೌ: ಮತಗಟ್ಟೆಗಳ ಬಳಿ ಗುರುತು ಪರಿಶೀಲನೆ ನೆಪದಲ್ಲಿ ಬುರ್ಖಾಧಾರಿ ಮುಸ್ಲಿಂ ಮಹಿಳೆಯರ ಮುಸುಕು ತೆಗೆಸದಂತೆ ಪೊಲೀಸರಿಗೆ ಚುನಾವಣಾ ಆಯೋಗ ಸೂಚನೆ ನೀಡಬೇಕು ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಮನವಿ ಮಾಡಿದೆ.

ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ.

ಈ ಸಂಬಂಧ ಚುನಾವಣಾ ಆಯೋಗಕ್ಕೆ ಮಂಗಳವಾರ ಪತ್ರ ಬರೆದಿರುವ ಎಸ್‌ಪಿ, ಪೊಲೀಸರು ಗುರುತಿನ ಚೀಟಿಗಳನ್ನು ಪರಿಶೀಲಿಸುವ ನೆಪದಲ್ಲಿ ನಿರ್ದಿಷ್ಟ ಸಮುದಾಯದ ಜನರಿಗೆ ಮತದಾನದ ದಿನ ಬೆದರಿಕೆಯೊಡ್ಡಲು ಪ್ರಯತ್ನಿಸಬಹುದು ಎಂದು ಆರೋಪಿಸಿದೆ.

ADVERTISEMENT

'ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಮತದಾನದ ದಿನ ಪೊಲೀಸರು ಮುಸ್ಲಿಂ ಮಹಿಳೆಯರನ್ನು ಮುಸುಕು ತೆಗೆಯುವಂತೆ ಹಾಗೂ ಐಡಿ ಕಾರ್ಡ್‌ಗಳನ್ನು ತೋರಿಸುವಂತೆ ಒತ್ತಾಯಿಸಿದ್ದರು. ಇದರಿಂದಾಗಿ, ನಮ್ಮ ಪಕ್ಷದ ಬೆಂಬಲಿಗರು, ಅದರಲ್ಲೂ ಮುಸ್ಲಿಂ ಮಹಿಳೆಯರು ತಮ್ಮ ಹಕ್ಕು ಚಲಾಯಿಸದೆ ವಾಪಸ್‌ ಹೋಗಿದ್ದರು' ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಆರು ಪುಟಗಳ ಪತ್ರದಲ್ಲಿ ಹೇಳಿದೆ.

'ಈ ಬಗ್ಗೆ ರಾಜ್ಯ ಪೊಲೀಸರು ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಇತರ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಬೇಕು' ಎಂದು ಬೇಡಿಕೆ ಇಟ್ಟಿರುವ ಎಸ್‌ಪಿ, 'ಮತದಾರರ ಗುರುತಿನ ಚೀಟಿ ಪರಿಶೀಲಿಸುವ ಅಧಿಕಾರ ಮತಗಟ್ಟೆ ಅಧಿಕಾರಿಗೆ ಇದೆ' ಎಂದೂ ಉಲ್ಲೇಖಿಸಿದೆ.

ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ್ದ ಎಸ್‌ಪಿ ನಾಯಕರು, ಬಿಜೆಪಿಯು ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಅಧಿಕಾರಿಗಳು ಮತ್ತು ಪೊಲೀಸರು ಎಸ್‌ಪಿ ಬೆಂಬಲಿಗರನ್ನು ಬೆದರಿಸುತ್ತಿದ್ದಾರೆ ಎಂದು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.