ನವದೆಹಲಿ: ರಾಷ್ಟ್ರದ ಪ್ರಾದೇಶಿಕ ರಾಜಕೀಯ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷವು 2017–18ನೇ ಸಾಲಿನ ಅತಿ ಶ್ರೀಮಂತ ಪಕ್ಷ ಎನಿಸಿಕೊಂಡಿದೆ. ಎರಡನೇ, ಮೂರನೇ ಸ್ಥಾನದಲ್ಲಿ ಡಿಎಂಕೆ ಮತ್ತು ಟಿಆರ್‌ಎಸ್ ಪಕ್ಷಗಳಿವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರೀಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.
ರಾಷ್ಟ್ರದಲ್ಲಿ ಒಟ್ಟು 48 ಪ್ರಾದೇಶಿಕ ಪಕ್ಷಗಳಿದ್ದು, ಅದರಲ್ಲಿ 37 ಪಕ್ಷಗಳ ಆದಾಯ ಮತ್ತು ಖರ್ಚು/ವೆಚ್ಚವನ್ನು ಎಡಿಆರ್ ವಿಶ್ಲೇಷಿಸಿದ್ದು, ಒಟ್ಟು ಆದಾಯ ₹237.27ಕೋಟಿ.
ಪಕ್ಷಗಳ ಆದಾಯ (ಕೋಟಿಗಳಲ್ಲಿ)
* ಎಸ್‌ಪಿ – ₹ 47.19
* ಡಿಎಂಕೆ – ₹ 35.748
* ಟಿಆರ್‌ಎಸ್ – ₹ 27.27
* ಒಟ್ಟು ಮೊತ್ತ – ₹110.21
ಎಡಿಆರ್ ವರದಿಯಲ್ಲಿ ಉಲ್ಲೇಖಿಸಿರುವಂತೆ, ಕಳೆದ ವರ್ಷ 34 ಪಕ್ಷಗಳ ಆದಾಯ ₹409.64 (2016–17) ಆಗಿತ್ತು. ಈ ಬಾರಿ ₹ 236.86 (2017–18) ಆಗಿದೆ. ಅಂದರೆ ಕಳೆದ ಬಾರಿಗಿಂತ ಈ ಸಲ ಶೇ 42ರಷ್ಟು ಇಳಿಕೆ ಕಂಡಿದೆ.
ಇನ್ನು ಖರ್ಚು/ವೆಚ್ಚ ನೋಡುವುದಾದರೆ,₹468.63 ಕೋಟಿ (2016-17). 2017-18ನೇ ವರ್ಷದಲ್ಲಿ ಶೇ 63.72 ಕುಸಿದಿದೆ.48 ಪ್ರಾದೇಶಿಕ ಪಕ್ಷಗಳ ಪೈಕಿ 37ರಲೆಕ್ಕಾಚಾರವನ್ನು ಕಲೆಹಾಕಲಾಗಿದ್ದು, ಇನ್ನುಳಿದ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಬಿಪಿಎಫ್ ಪಕ್ಷಗಳು ಸೇರಿದಂತೆ 11 ಪಕ್ಷಗಳ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.
48ರಲ್ಲಿ ಕೇವಲ 20 ಪಕ್ಷಗಳು ಮಾತ್ರ ಅಕ್ಟೋಬರ್ 30, 2018ರೊಳಗೆ ಮಾಹಿತಿಯನ್ನು ನೀಡಿದ್ದು, 17 ಪಕ್ಷಗಳು ದಾಖಲೆ ನೀಡಲು ತಡಮಾಡಿವೆ.
ಆದಾಯದ ಮೂಲಗಳು
ಪಕ್ಷಗಳಿಗೆ ಸದಸ್ಯತ್ವ ನೋಂದಣಿ ಶುಲ್ಕ, ಕೊಡುಗೆಗಳು, ದಾನ–ದತ್ತಿ, ಚಂದಾ ಹೀಗೆ ಹಲವಾರು ಮೂಲಗಳಿಂದ ಪಕ್ಷಗಳಿಗೆ ಹಣ ಹರಿದು ಬರುತ್ತದೆ. ಎಲ್ಲಾ ಪಕ್ಷಗಳಿಂದ ಒಟ್ಟಾಗಿ ₹77.30 ಕೋಟಿ (ಶೇ 32.58) ಸಂಗ್ರಹವಾಗಿದೆ. ಇದರಲ್ಲಿ ಜೆಡಿ(ಎಸ್) ಪಕ್ಷವು ₹6.03 ಕೋಟಿ ಬಂದಿರುವುದಾಗಿ ಹೇಳಿದೆ. ಅಲ್ಲದೇ ಎಲ್ಲಾ ಪಕ್ಷಗಳ ಸದಸ್ಯತ್ವ ನೋಂದಣಿ ಶುಲ್ಕದ ಮೊತ್ತ ₹86.6 ಕೋಟಿ (ಶೇ 36.50). ಇದರಲ್ಲಿ ಟಿಆರ್‌ಎಸ್ ಹೆಚ್ಚು ಅಂದರೆ ₹22.909 ಆದಾಯ ಪಡೆಯುವ ಪಕ್ಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.