ಸಂಭಲ್ (ಉತ್ತರ ಪ್ರದೇಶ): ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆದಿದ್ದ ಸಂಭಲ್ ಜಿಲ್ಲೆಯ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಎರಡು ದಿನಗಳ ಬಳಿಕ ಶಾಲೆಗಳು ಪುನರಾರಂಭಗೊಂಡಿದ್ದು, ದೈನಂದಿನ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳು ಕೆಲಸ ಪ್ರಾರಂಭಿಸಿವೆ.
ಸಂಭಲ್ ಜಿಲ್ಲೆಯ ಪರಿಸ್ಥಿತಿ ಕುರಿತು ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಮೇಲ್ವಿಚಾರಣೆ ಮುಂದುವರಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ.
ಹಿಂಸಾಚಾರ ಬೆನ್ನಲ್ಲೇ ನವೆಂಬರ್ 30ರವರೆಗೆ ಜಿಲ್ಲೆಗೆ ಹೊರಗಿನವರು ಮತ್ತು ಜನ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇಂಟರ್‌ನೆಟ್ ಸೇವೆಯ ಸ್ಥಗಿತ ಮುಂದುವರಿದಿದೆ.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಪರಿಸ್ಥಿತಿ ಶಾಂತವಾಗಿ ಕಂಡುಬಂದರೂ, ಶಾಹಿ ಜಾಮಾ ಮಸೀದಿ ಸುತ್ತಮುತ್ತಲಿನ ಪ್ರದೇಶಗಳು ನಿರ್ಜನವಾಗಿತ್ತು.
‘ಜಿಲ್ಲೆಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಕಾರಣರಾದ ಶಂಕಿತರನ್ನು ಪತ್ತೆ ಹಚ್ಚಲು ಡ್ರೋನ್ ದೃಶ್ಯಗಳು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮತ್ತು ಮೊಬೈಲ್ ವಿಡಿಯೊಗಳನ್ನು ಪೊಲೀಸರು ವಿಶ್ಲೇಷಿಸುತ್ತಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ವಿಷ್ಣೋಯ್ ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಬುಲೆಟ್ ತಗುಲಿ ಗಾಯಗೊಂಡಿದ್ದ ನಾಲ್ಕನೇ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಇದರಿಂದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.