ಲಖನೌ: ಉತ್ತರ ಪ್ರದೇಶದ ಸಂಭಲ್ ನಗರದ ಶಾಹಿ ಜಾಮಾ ಮಸೀದಿ ಸಮೀಕ್ಷೆಯನ್ನು ವಿರೋಧಿಸಿ ಭಾನುವಾರ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಎಫ್‌ಐಆರ್ ದಾಖಲಿಸಲಾಗಿದ್ದು, 25 ಜನರನ್ನು ಬಂಧಿಸಲಾಗಿದೆ.
ಸಮಾಜವಾದಿ ಪಕ್ಷದ ಲೋಕಸಭಾ ಸದಸ್ಯ (ಸಂಭಲ್ ಕ್ಷೇತ್ರ) ಜಿಯಾ–ಉರ್–ರೆಹಮಾನ್ ಬುರ್ಕ್, ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೊಹೈಲ್ ಇಕ್ಬಾಲ್ ಸೇರಿದಂತೆ ಆರು ಜನರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಅಲ್ಲದೆ ಇತರ 2,750 ಅಪರಿಚಿತರ ವಿರುದ್ಧ ಪ್ರಕರಣದ ದಾಖಲಿಸಲಾಗಿದ್ದು, ಅವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಸೀದಿಯ ಸಮೀಕ್ಷೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪ್ರಚೋದಿಸಿದ ಆರೋಪವನ್ನು ಬುರ್ಕ್ ಮತ್ತು ಸೊಹೈಲ್ ಅವರ ಮೇಲೆ ಹೊರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಗತ್ಯವಿದ್ದರೆ ಹಿಂಸಾಚಾರದಲ್ಲಿ ತೊಡಗಿದ್ದ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಸಂಖ್ಯೆ ನಾಲ್ಕಕ್ಕೇರಿಕೆ: ಹಿಂಸಾಚಾರದಲ್ಲಿ ಬುಲೆಟ್ ತಗುಲಿ ಗಾಯಗೊಂಡಿದ್ದ ನಾಲ್ಕನೇ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಇದರಿಂದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಹಿಂಸಾಚಾರದ ವೇಳೆ ಉದ್ರಿಕ್ತರ ಗುಂಪಿನ ಜನರತ್ತ ಗುಂಡು ಹಾರಿಸಿರುವುದನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರತಿಭಟನಕಾರರು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಮೃತಪಟ್ಟಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಭಾನುವಾರದ ಘರ್ಷಣೆ ವೇಳೆ ಮೃತಪಟ್ಟಿದ್ದ ನಯೀಮ್, ಬಿಲಾಲ್ ಹಾಗೂ ನೌಮಾನ್ (ಎಲ್ಲರೂ 25 ವಯೋಮಾನದವರು) ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಗಿ ಬಂದೋಬಸ್ತ್: ನಗರದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಜಿಲ್ಲೆಯಾದ್ಯಂತ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಹೊರಗಿನವರ ಪ್ರವೇಶದ ಮೇಲೆ ಇದೇ 30ರವರೆಗೆ ನಿರ್ಬಂಧ ವಿಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಸೋಮವಾರ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿತ್ತು. ಭಾನುವಾರ ಹಿಂಸಾಚಾರ ನಡೆದಿದ್ದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ‘ಫ್ಲ್ಯಾಗ್ ಮಾರ್ಚ್’ ನಡೆಸಿದರು.
‘ಸದ್ಯ ಪರಿಸ್ಥಿತಿ ಶಾಂತಿಯುತವಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಮೊರಾದಾಬಾದ್‌ನ ವಿಭಾಗೀಯ ಆಯುಕ್ತ ಅಂಜೇನ್ಯ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಹಿನ್ನೆಲೆ: ಶಾಹಿ ಜಾಮಾ ಮಸೀದಿಯ ಸಮೀಕ್ಷೆಯನ್ನು ವಿರೋಧಿಸಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದವರು ಭದ್ರತಾ ಸಿಬ್ಬಂದಿ ಜೊತೆ ಘರ್ಷಣೆಗಿಳಿದಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಪ್ರತಿಭಟನಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಲ್ಲದೇ, ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಷೆಲ್‌ಗಳನ್ನು ಸಿಡಿಸಿದ್ದರು.
ಹಿಂಸಾಚಾರಕ್ಕೆ ಎಸ್‌ಡಿಎಂ ಸಿ.ಒ ಕಾರಣ: ಮಸೀದಿ ಸಮಿತಿ ಆರೋಪ ಸಂಭಲ್ (ಪಿಟಿಐ): ನಾಲ್ವರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರೇ ಕಾರಣ ಎಂದು ಸಂಭಲ್‌ನ ಜಾಮಾ ಮಸೀದಿ ಆಡಳಿತ ಸಮಿತಿ ದೂರಿದೆ.
‘ಇತ್ತೀಚಿನ ಸಮೀಕ್ಷೆಯು ನ್ಯಾಯಾಲಯದ ಆದೇಶದ ಅಡಿಯಲ್ಲಿ ನಡೆದದ್ದಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ನಡೆಸಲಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದ ಸಮಿತಿ ಅಧ್ಯಕ್ಷ ಜಾಫರ್ ಅಲಿ ‘ಕಾನೂನು ಬಾಹಿರವಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ’ ಎಂದು ಆರೋಪಿಸಿದರು.
ಈ ಘಟನೆಯಲ್ಲಿ ಸಂಭಲ್‌ನ ಉಪ ವಿಭಾಗಾಧಿಕಾರಿ (ಎಸ್‌ಡಿಎಂ) ವಂದನಾ ಮಿಶ್ರಾ ಮತ್ತು ಸರ್ಕಲ್ ಆಫೀಸರ್ (ಸಿಒ) ಅನುಜ್ ಕುಮಾರ್ ತಪ್ಪಿತಸ್ಥರಾಗಿದ್ದಾರೆ ಎಂದು ಅವರು ಆರೋಪ ಮಾಡಿದರು. ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಪೊಲೀಸರು ಅಲಿ ಅವರನ್ನು ಬಂಧಿಸಿದರು.
ಆರೋಪಗಳೇನು: ಮಸೀದಿಯ ‘ವಾಜುಖಾನಾ’ ತೊಟ್ಟಿಯ ಆಳವನ್ನು ಕೋಲಿನ ಸಹಾಯದಿಂದ ಅಳೆಯುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದರೂ ವಂದನಾ ಮಿಶ್ರಾ ಅವರು ತೊಟ್ಟಿಯ ನೀರನ್ನು ಖಾಲಿ ಮಾಡುವಂತೆ ಒತ್ತಾಯಿಸಿದರು. ನೀರು ಹರಿಸಿದ್ದರಿಂದ ಹೊರಗೆ ನೆರೆದಿದ್ದ ಜನರಲ್ಲಿ ಗೊಂದಲ ಉಂಟಾಯಿತು. ಉತ್ಖನನ ನಡೆಯುತ್ತಿದೆ ಎಂದು ಭಾವಿಸಿದ ಜನರ ಗುಂಪು ಕೆರಳಿತು ಎಂದು ಅಲಿ ವಿವರಿಸಿದರು.
‘ನೆರೆದಿದ್ದ ಜನರನ್ನು ಅನುಜ್ ಕುಮಾರ್ ಪ್ರಚೋದಿಸಿದರು. ಅಲ್ಲದೆ ಲಾಠಿ ಚಾರ್ಜ್‌ಗೆ ಆದೇಶಿಸಿದರು ಎಂದು ಅವರು ದೂರಿದರು. ಜನರ ಗುಂಪಿನ ಮೇಲೆ ಪೊಲೀಸರು ಗುಂಡು ಹಾರಿಸಿದ್ದನ್ನು ನಾನೇ ಖುದ್ದಾಗಿ ನೋಡಿದ್ದೇನೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.