ADVERTISEMENT

ಉತ್ತರ ಪ್ರದೇಶ | ಸಂಭಲ್ ಹಿಂಸಾಚಾರ; ನಿಷೇಧಾಜ್ಞೆ, ಹೊರಗಿನವರ ಪ್ರವೇಶಕ್ಕೆ ನಿರ್ಬಂಧ

ಪಿಟಿಐ
Published 25 ನವೆಂಬರ್ 2024, 4:21 IST
Last Updated 25 ನವೆಂಬರ್ 2024, 4:21 IST
<div class="paragraphs"><p>ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯಲ್ಲಿ&nbsp; ನಡೆದ ಹಿಂಸಾಚಾರದ ದೃಶ್ಯ</p></div>

ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯಲ್ಲಿ  ನಡೆದ ಹಿಂಸಾಚಾರದ ದೃಶ್ಯ

   

ಪಿಟಿಐ ಚಿತ್ರ

ಸಂಭಲ್‌: ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವಿರೋಧಿಸಿ ಪ್ರತಿಭಟನಕಾರರು ನಡೆಸಿದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದು, ಭದ್ರತಾ ಸಿಬ್ಬಂದಿ ಸೇರಿ ಹಲವು ಗಾಯಗೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದ್ದು, ನ.30ರವರೆಗೆ ಹೊರಗಿನ ಜನರ ಪ್ರವೇಶಕ್ಕೆ ನಿರ್ಬಂಧ ಹೇ ರಿ ಆದೇಶಿಸಿದೆ.

ADVERTISEMENT

‘ತಕ್ಷಣದಿಂದ ಜಾರಿಯಾಗುವಂತೆ, ಸಕ್ಷಮ ಅಧಿಕಾರಿಯ ಅನುಮತಿಯಿಲ್ಲದೆ ಹೊರಗಿನವರು, ಇತರ ಸಾಮಾಜಿಕ ಸಂಘಟನೆಗಳು ಅಥವಾ ಜನಪ್ರತಿನಿಧಿಗಳು ಜಿಲ್ಲೆಯ ಗಡಿಯನ್ನು ಪ್ರವೇಶಿಸುವಂತಿಲ್ಲ’ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

ಜಾಮಾ ಮಸೀದಿಯಿದ್ದ ಜಾಗದಲ್ಲಿ ಪುರಾತನ ಹಿಂದೂ ದೇವಾಲಯವಿತ್ತು, ಮೊಘಲ್‌ ದೊರೆ ಬಾಬರ್‌ ಆಳ್ವಿಕೆ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ದೇಗುಲಕ್ಕೆ ಸೇರಿದ ಅನೇಕ ಗುರುತುಗಳೂ ಅಲ್ಲಿವೆ ಎಂದು ಸುಪ್ರೀಂ ಕೋರ್ಟ್‌ ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ವಿಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣ ಸಮೇತ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿತ್ತು.

‘ಸಮೀಕ್ಷೆಯು ಶಾಂತಿಯುತವಾಗಿಯೇ ನಡೆಯುತ್ತಿತ್ತು. ಮಸೀದಿ ಸಮೀಪ ಜಮಾಯಿಸಿದ್ದ ಜನರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅವರನ್ನು ಚದುರಿಸಲು ಪೊಲೀಸರು ಮುಂದಾದಾಗ, ದುಷ್ಕರ್ಮಿಗಳ ಗುಂಪೊಂದು ಪೊಲೀಸರತ್ತ ಕಲ್ಲುಗಳನ್ನು ತೂರಲು ಆರಂಭಿಸಿತು. ನಂತರ ಘರ್ಷಣೆ ಹಿಂಸಾರೂಪ ಪಡೆಯಿತು’ ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ  ಆಂಜನೇಯ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.