ನವದೆಹಲಿ: ‘ಮಹಾಪ್ರಭು ಜಗನ್ನಾಥ ದೇವರು ಮೋದಿ ಅವರ ಭಕ್ತ’ ಎಂದು ಪುರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಹೇಳಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್, ಬಿಜೆಡಿ, ಎಎಪಿ ಪಕ್ಷಗಳು ಮಂಗಳವಾರ ಟೀಕಿಸಿವೆ.
ಒಡಿಯಾ ಭಾಷೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ ಸಂಬಿತ್ ಈ ರೀತಿ ಹೇಳಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿರುವ ಕಾಂಗ್ರೆಸ್ ಪಕ್ಷವು, ಪ್ರಧಾನಿ ಮೋದಿ ಇದಕ್ಕೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ‘ದೇವರನ್ನು ಎಲ್ಲ ರಾಜಕೀಯಗಳಿಂದ ಬಿಜೆಪಿ ದೂರ ಇರಿಸಬೇಕು. ದೇವರು ಎಲ್ಲರಿಗಿಂತ ದೊಡ್ಡವನು. ಜಗನ್ನಾಥನ ಊರಿನವರ ಅಸ್ಮಿತೆಗೇ ಕೊಟ್ಟಿರುವ ಪೆಟ್ಟು ಇದು. ಕೋಟ್ಯಂತರ ಭಕ್ತರ ಭಾವನೆಗಳಿಗೆ ಮಾಡಿದ ಅಪಮಾನವಿದು’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಮೋದಿ ಅವರ ರೋಡ್ ಶೋ ನಂತರ ನಾನು ಹಲವು ಸುದ್ದಿ ವಾಹಿನಿಗಳಿಗೆ ಮಾತನಾಡುತ್ತಿದ್ದೆ. ಮೋದಿ ಅವರು ಜಗನ್ನಾಥ ದೇವರ ಭಕ್ತ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಅಕಸ್ಮಾತ್ತಾಗಿ ಬಾಯಿತಪ್ಪಿ ಜಗನ್ನಾಥ ದೇವರು ಮೋದಿ ಭಕ್ತ ಎಂದು ಹೇಳಿಬಿಟ್ಟೆ. ಬಾಯಿತಪ್ಪಿ ಮಾತನಾಡುವುದು ಮನುಷ್ಯ ಸಹಜ ಎನ್ನುವುದನ್ನೂ ಒಪ್ಪುವಿರಿ ಎಂದು ಭಾವಿಸಿದ್ದೇನೆ. ಇದನ್ನು ದೊಡ್ಡ ವಿವಾದ ಮಾಡಬೇಡಿ’ ಎಂದು ನವೀನ್ ಪಟ್ನಾಯಕ್ ಅವರ ಪೋಸ್ಟ್‌ಗೆ ‘ಎಕ್ಸ್’ನಲ್ಲಿ ಸಂಬಿತ್ ಪಾತ್ರಾ ಪ್ರತಿಕ್ರಿಯಿಸಿದ್ದಾರೆ.
ಮೋದಿ ತಮ್ಮನ್ನು ಸಾಮ್ರಾಟ ಎಂದು ಭಾವಿಸಿ, ಅವರ ಆಸ್ಥಾನದಲ್ಲಿ ಇರುವವರೆಲ್ಲ ಅವರನ್ನು ದೇವರೆಂದು ಹೇಳಲು ಪ್ರಾರಂಭಿಸಿದ್ದಾರೆ ಎಂದರೆ ‘ಪಾಪದ ಲಂಕೆ’ ಮುಳುಗುವ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ–ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಇದು ದುರಹಂಕಾರದ ಪರಮಾವಧಿ. ದೇವರನ್ನೇ ಮೋದಿ ಭಕ್ತ ಎನ್ನುವುದು ಭಗವಂತನಿಗೆ ಮಾಡಿದ ಅವಮಾನ–ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.