ADVERTISEMENT

ಮಹಾರಾಷ್ಟ್ರ ಸಚಿವ ಮಲಿಕ್ ವಿರುದ್ಧ ಸಮೀರ್‌ ವಾಂಖೆಡೆ ಸಹೋದರಿ ಯಾಸ್ಮೀನ್ ದೂರು

ಪಿಟಿಐ
Published 28 ಅಕ್ಟೋಬರ್ 2021, 7:47 IST
Last Updated 28 ಅಕ್ಟೋಬರ್ 2021, 7:47 IST
ನವಾಬ್ ಮಲಿಕ್
ನವಾಬ್ ಮಲಿಕ್   

ಮುಂಬೈ: ಮಾದಕ ವಸ್ತು ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಮುಂಬೈ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಅವರ ಸಹೋದರಿ ಯಾಸ್ಮೀನ್ ವಾಂಖೆಡೆ ಅವರು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಒಶಿವಾರಾ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಯಾಸ್ಮೀನ್ ಅವರು ಪೊಲೀಸರಿಗೆ ಸಲ್ಲಿಸಿದ ಎರಡು ಪುಟಗಳ ದೂರಿನಲ್ಲಿ, ‘ಮಲಿಕ್ ಅವರು ತನ್ನ ಕುಟುಂಬವನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿದ್ದಾರೆ. ನಮ್ಮ ಕುಟುಂಬದ ಮಾಲ್ಡೀವ್ಸ್‌ ಪ್ರವಾಸವನ್ನು ‘ವಸೂಲಿ (ಸುಲಿಗೆ) ಪ್ರವಾಸ‘ ಎಂದು ಕರೆದಿದ್ದಾರೆಂದು ಉಲ್ಲೇಖಿಸಿದ್ದಾರೆ. ಈ ಮೂಲಕ ಅವರು ನನ್ನ ಮತ್ತು ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

‘ನನ್ನ ಮತ್ತು ನನ್ನ ಕುಟುಂಬ ಸದಸ್ಯರ ವಿರುದ್ಧ ದೋಷಾರೋಪಣೆ ಮಾಡಲು ಯತ್ನಿಸುತ್ತಿದ್ದಾರೆ‘ ಎಂದು ಆರೋಪಿಸಿರುವ ಯಾಸ್ಮೀನ್, ‘ನನ್ನನ್ನು ಆನ್‌ಲೈನ್‌ನಲ್ಲಿ ಹಿಂಬಾಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ಗಳಲ್ಲಿ ಇತ್ತೀಚೆಗೆ ನಾನು ಪೋಸ್ಟ್‌ ಮಾಡಿದ್ದ ನನ್ನ ವೈಯಕ್ತಿಕ ಫೋಟೋಗಳನ್ನು ಮಾಧ್ಯಮದವರಿಗೆ ಅಕ್ರಮವಾಗಿ ನೀಡುತ್ತಿದ್ದಾರೆ‘ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಕಳೆದ ವಾರ ಯಾಸ್ಮೀನ್ ವಾಂಖೆಡೆಯವರಿಂದ ದೂರು ಸ್ವೀಕರಿಸಿದ್ದೇವೆ. ಆದರೆ, ಇಲ್ಲಿವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ‘ ಎಂದು ಒಶಿವಾರಾ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾಸ್ಮೀನ್ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ಮಹಿಳೆಯರಿಗೆ ಅವಮಾನ, ಬೆದರಿಕೆ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತದ್ದು, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಖಾಸಗಿತನಕ್ಕೆ ಧಕ್ಕೆ ತರುವ ಮೂಲಕ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘಿಸಿರುವುದು ಮತ್ತು ಎಸ್ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.