ADVERTISEMENT

ಸಮಜೋತಾ ರೈಲಿಗೆ ಪಾಕ್ ತಡೆ

ವಾಘಾ ಗಡಿಯಲ್ಲೇ ನಿಲುಗಡೆ; ಅಟ್ಟಾರಿಗೆ ಬಾರದ ರೈಲು

ಪಿಟಿಐ
Published 8 ಆಗಸ್ಟ್ 2019, 18:38 IST
Last Updated 8 ಆಗಸ್ಟ್ 2019, 18:38 IST
ಪಾಕ್‌ನ ವಾಘಾ ಗಡಿ ದಾಟಿ ಭಾರತದ ಅಟ್ಟಾರಿ ಗಡಿಯತ್ತ ಸಾಗುತ್ತಿರುವ ಸಮಜೋತಾ ರೈಲು (ಸಂಗ್ರಹ ಚಿತ್ರ)
ಪಾಕ್‌ನ ವಾಘಾ ಗಡಿ ದಾಟಿ ಭಾರತದ ಅಟ್ಟಾರಿ ಗಡಿಯತ್ತ ಸಾಗುತ್ತಿರುವ ಸಮಜೋತಾ ರೈಲು (ಸಂಗ್ರಹ ಚಿತ್ರ)   

ನವದೆಹಲಿ: ಪಾಕಿಸ್ತಾನವು ಭದ್ರತಾ ಕಾರಣಗಳನ್ನು ಒಡ್ಡಿ, ಸಮಜೋತಾ ಎಕ್ಸ್‌ಪ್ರೆಸ್ ರೈಲನ್ನು ವಾಘಾ ಗಡಿಯಲ್ಲಿ ಗುರುವಾರ ತಡೆ ಹಿಡೆದಿದೆ. ಭಾರತದ ಕಡೆಯ ಭದ್ರತಾ ಸಿಬ್ಬಂದಿಯು ರೈಲಿಗೆ ಬೆಂಗಾವಲು ನೀಡಿ ಭಾರತದ ಅಟ್ಟಾರಿ ಗಡಿಯವರೆಗೂ ಕರೆತಂದಿದ್ದಾರೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

110 ಜನರು ಪಾಕಿಸ್ತಾನದಿಂದ ಭಾರತಕ್ಕೆ ಬರಲುರೈಲು ಹತ್ತಿದ್ದರು. ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮೊಟಕುಗೊಳಿಸಲು ಪಾಕಿಸ್ತಾನ ನಿರ್ಧರಿಸಿದ ಮರುದಿನವೇ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹಮದ್ ಅವರು ಭಾರತಕ್ಕೆ ಸಮಜೋತಾ ರೈಲು ಸಂಚಾರ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದರು.

‘ರೈಲು ಸೇವೆ ಸ್ಥಗಿತಗೊಂಡಿಲ್ಲ. ರೈಲಿನ ಭದ್ರತೆ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಅವರಿಗೆ ಮನವರಿಕೆ ಮಾಡಿದ್ದೇವೆ’ ಎಂದು ಉತ್ತರ ವಲಯ ರೈಲ್ವೆ ವಕ್ತಾರ ದೀಪಕ್ ಕುಮಾರ್ ಹೇಳಿದ್ದಾರೆ.

ADVERTISEMENT

‘ನಮ್ಮ ರೈಲ್ವೆ ಇಲಾಖೆಯ ಎಂಜಿನ್, ರೈಲ್ವೆ ಸಿಬ್ಬಂದಿ ಹಾಗೂ ನಮ್ಮ ಭದ್ರತಾ ಸಿಬ್ಬಂದಿ ಸೇರಿಕೊಂಡು ರೈಲನ್ನು ವಾಘಾದಿಂದ ಅಟ್ಟಾರಿ ಗಡಿವರೆಗೂ ತಂದಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತದ ಕಡೆಯಿಂದ ಪಾಕಿಸ್ತಾನಕ್ಕೆ ತೆರಳಲು 70 ಪ್ರಯಾಣಿಕರು ಕಾಯುತ್ತಿದ್ದಾರೆ.

ದೆಹಲಿ–ಲಾಹೋರ್ ನಡುವಿನ ಸಮಜೋತಾ ರೈಲು ಸಂಚಾರ ನಿಯಮಗಳ ಪ್ರಕಾರ, ಎರಡೂ ಕಡೆಯ ರೈಲುಗಳು ಅಟ್ಟಾರಿ ಗಡಿಯಲ್ಲಿ ಸಂಧಿಸುತ್ತವೆ. ಲಾಹೋರ್‌ನಿಂದ ಬಂದ ಪ್ರಯಾಣಿಕರು ಅಟ್ಟಾರಿಯಲ್ಲಿ ದೆಹಲಿಗೆ ತೆರಳುವ ರೈಲನ್ನು ಹತ್ತುತ್ತಾರೆ. ಲಾಹೋರ್‌ಗೆ ತೆರಳುವ ಪ್ರಯಾಣಿಕರು ಅಟ್ಟಾರಿಯಲ್ಲಿ ಪಾಕಿಸ್ತಾನದ ರೈಲನ್ನು ಹತ್ತಿ ವಾಘಾ ಮೂಲಕ ಪಾಕ್‌ ಪ್ರವೇಶಿಸುತ್ತಾರೆ.

ಆದರೆ ಗುರುವಾರ, ಲಾಹೋರ್‌ನಿಂದ ಹೊರಟಿದ್ದ ಸಮಜೋತಾ ಎಕ್ಸ್‌ಪ್ರೆಸ್ ರೈಲು ನಿಯಮದ ಪ್ರಕಾರ ಅಟ್ಟಾರಿಯನ್ನು ತಲುಪಲಿಲ್ಲ. ಬದಲಾಗಿ ಪಾಕಿಸ್ತಾನದ ಕಡೆಯ ವಾಘಾ ಗಡಿಯಲ್ಲೇ ಅದಕ್ಕೆ ತಡೆ ಒಡ್ಡಲಾಯತು.

ಸಮಜೋತಾ ರೈಲು:

ಸ್ಲೀಪರ್‌ ದರ್ಜೆಯ 6 ಬೋಗಿ, ಎಸಿ 3–ಟೈರ್‌ನ 1 ಬೋಗಿ ಒಳಗೊಂಡ ಸಮಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯು ಶಿಮ್ಲಾ ಒಪ್ಪಂದದ ಅನುಸಾರ 22 ಜುಲೈ 1976ರಂದು ಆರಂಭವಾಯಿತು. ಪುಲ್ವಾಮಾ ದಾಳಿಯ ಬಳಿಕ ಫೆಬ್ರುವರಿ 28ರಂದು ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.