‘ನನ್ನ ಐದು ಮಕ್ಕಳ ಸಾವಿಗೆ ಯಾರು ಉತ್ತರಿಸುತ್ತಾರೆ? ಅವರನ್ನು ಕೊಂದವರು ಯಾರು? ಈ ತೀರ್ಪು ನನ್ನ ಪ್ರಾಣವನ್ನು ತೆಗೆದಂತಾಗಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಸಾಕ್ಷಿಯಾಗಲು ನನ್ನನ್ನು ಯಾರೊಬ್ಬರೂ ಕೇಳಿಲ್ಲ’
–
ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ನೀಡಿದ ತೀರ್ಪಿಗೆ ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ರಾಣಾ ಶೌಕತ್ ಅಲಿ(61) ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.
2007ರ ಫೆಬ್ರುವರಿ 18ರಂದು ಹರಿಯಾಣದ ಪಾಣಿಪತ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಅಲಿ ಹಾಗೂ ರುಬ್ಸಾನ(54) ದಂಪತಿಯ ಐದು ಮಕ್ಕಳು ಮೃತಪಟ್ಟಿದ್ದರು. ಸ್ಫೋಟ ಪ್ರಕರಣದಲ್ಲಿ ಪುತ್ರಿ ಅಕ್ಷಾ ಶೆಹ್ಜಾದಿ(12) ಜೊತೆ ಪ್ರಾಣಾಪಾಯದಿಂದ ಪಾರಾಗಿದ್ದ ದಂಪತಿಗೆ ಈಗ ಇನ್ನೊಂದು ಹೆಣ್ಣುಮಗುವಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರತ್ಯಕ್ಷ ಸಾಕ್ಷಿಗಳನ್ನು ಸಹ ವಿಚಾರಣೆಗೆ ಪರಿಗಣಿಸಬೇಕು ಎಂದು ಆ ದೇಶದ ಮಹಿಳೆರಹಿಲಾ ವಕೀಲ್ ಎನ್ನುವವರು ಮಾರ್ಚ್ 11ರಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಜಗದೀಫ್ ಸಿಂಗ್ ತಿರಸ್ಕರಿಸಿದರು. ಈ ಅರ್ಜಿಯು ವಿಚಾರಣೆಗೆ ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಅದಕ್ಕೂ ಮುನ್ನ ಪ್ರಕರಣದ ಪ್ರಮುಖ ಆರೋಪಿಗಳಾದಸ್ವಾಮಿ ಅಸೀಮಾನಂದ ಮತ್ತು ಇತರ ಮೂವರನ್ನು ಖುಲಾಸೆಗೊಳಿಸಲಾಯಿತು.
ವಿಶೇಷ ನ್ಯಾಯಾಲಯದ ತೀರ್ಪಿನ ಬಳಿಕ ಅಲಿ ದಂಪತಿಯೊಡನೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಮಾತನಾಡಿದ್ದು, ಮಾತುಕತೆಯ ವಿವರ ಇಲ್ಲಿದೆ.
‘ಸತ್ತವರು ಹಿಂದೂಗಳೋ.. ಮುಸ್ಲೀಮರೋ.. ಆದರೆ ಅವರು ಮಕ್ಕಳು. ಅವರನ್ನು ಕೊಂದವರು ಯಾರು? ನೀವೇ ಹೇಳಿ’ ಎಂದು ರುಬ್ಸಾನ ಪ್ರಶ್ನಿಸಿದ್ದಾರೆ.
ಸ್ಫೋಟ ಪ್ರಕರಣದ ಬಳಿಕ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿರುವುದಾಗಿಹೇಳಿಕೊಂಡ ದಂಪತಿ, ಭಾರತದ ಇಲ್ಲವೇ ಪಾಕಿಸ್ತಾನದ ಅಧಿಕಾರಿಗಳು ಒಮ್ಮೆಯಾದರೂ ನಾವು ನ್ಯಾಯಾಲಯದಲ್ಲಿ ಸಾಕ್ಷಿಯಾಗುವಂತೆ ಹೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಒಂದುವೇಳೆ ನಾವು ನಮ್ಮ ಹೇಳಿಕೆ ನೀಡಿದ್ದರೆ ಪ್ರಾಯಶಃ ವಿಚಾರಣೆ ವಿಭಿನ್ನ ತಿರುವು ಪಡೆದುಕೊಳ್ಳುತ್ತಿತ್ತು’ ಎಂದು ಅಲಿ ಅಭಿಪ್ರಾಯಪಟ್ಟಿದ್ದಾರೆ.
2007ರಲ್ಲಿ ಅಲಿ ಮತ್ತು ರುಬ್ಸಾನ ದಂಪತಿಸಂಬಂಧಿಯೊಬ್ಬರ ಮದುವೆ ಸಲುವಾಗಿ ದೆಹಲಿಯ ಲಕ್ಷ್ಮೀ ನಗರಕ್ಕೆ ತಮ್ಮ ಆರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ‘ನನಗಿನ್ನೂ ನೆನಪಿದೆ; ನನ್ನ ಮಕ್ಕಳು ಮದುವೆ ಸಂಭ್ರಮದಲ್ಲಿ ಕುಣಿದಿದ್ದವು. ನನ್ನ ದೊಡ್ಡ ಮಗಳು ಆಯಿಷಾ ತಬಾಸ್ಸುಮ್ ಹತ್ತನೇ ತರಗತಿ ಪರಿಕ್ಷೆ ತೆಗೆದುಕೊಂಡಿದ್ದಳು’ ಎಂದು ಹೇಳಿಕೊಂಡಿದ್ದಾರೆ ರುಬ್ಸಾನ.
ತಮ್ಮ 12 ವರ್ಷದ ಮಗ ರಾಣಾ ಮೊಹಮ್ಮದ್ ಬಿಲಾಲ್ ಹಾಗೂ 11 ವರ್ಷದ ರಾಣಾ ಮೊಹಮ್ಮದ್ ಅಮೀರ್ ಇಬ್ಬರೂ ಕಂಬಳಿ ಹೊದ್ದು ಮಲಗಿದ್ದರು.8 ವರ್ಷದ ಸಹೋದರಿ ಅಸ್ಮಾ ಶಹಜಾದಿ ಜೊತೆಆಯಿಷಾ ಹರಟುತ್ತಿದ್ದಳು ಎಂದುದುರಂತ ಸಂಭವಿಸುವ ಕೆಲ ಕ್ಷಣದ ಮೊದಲಿನ ನೆನಪುಗಳನ್ನು ಬಿಚ್ಚಿಟ್ಟರು ಅಲಿ.
ಯಾವಾಗ ರೈಲು ಸ್ಫೋಟಗೊಂಡಿತೋ ಆಗ ರೈಲಿನಿಂದ ಜಿಗಿದಿದ್ದಾಗಿ ಮತ್ತು ಆವೇಳೆ ಚಿಕ್ಕಮಗಳನ್ನು ತಬ್ಬಿಕೊಂಡು ರುಬ್ಸಾನ ಕೂಡ ತನ್ನನ್ನು ಹಿಂಬಾಲಿಸಿದ್ದಾಗಿ ಹೇಳಿಕೊಂಡ ಅಲಿ, ‘ರೈಲಿನ ತುಂಬ ಹೊಗೆ ತುಂಬಿಕೊಂಡಿತ್ತು. ನನ್ನ ಉಳಿದ ಮಕ್ಕಳು ಸುಟ್ಟು ಹೋದರು’ ಎಂದು ನೋವು ತೋಡಿಕೊಂಡಿದ್ದಾರೆ.
ಮುಂದುವರಿದು, ನಾವಿದ್ದ ಕೋಚ್‌ನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿದ್ದರು. ಅವರನ್ನು ರೈಲ್ವೆ ಪೊಲೀಸರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ವಿಚಾರಿದಾಗ ಅಹಮದಾಬಾದ್‌ಗೆ ಹೋಗುತ್ತಿರುವುದಾಗಿ ಹೇಳಿದರು. ಬಳಿಕ ಪೊಲೀಸರು ಲಾಹೋರ್‌ಗೆ ಹೋಗುವ ರೈಲಿನಲ್ಲಿ ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದರು. ಆ ಇಬ್ಬರೂ ದುರಂತ ಸಂಭವಿಸುವ 10–15 ನಿಮಿಷ ಮೊದಲು ರೈಲಿನಿಂದ ಇಳಿದಿದ್ದರು. ಅವರನ್ನು ಗುರುತಿಸುವುದಾಗಿ ನಾವು ತನಿಖಾಧಿಕಾರಿಗಳಿಗೆ ಕೇಳಿಕೊಂಡೆವು. ಆದರೆ ನಮ್ಮ ಮಾತನ್ನು ಯಾರೊಬ್ಬರೂ ಆಲಿಸಲಿಲ್ಲ’ ಎಂದು ಅಳಲುತೋಡಿಕೊಂಡಿದ್ದಾರೆ.
ಸ್ಫೋಟದ ಬಳಿಕ ದೆಹಲಿಯಲ್ಲಿ ಉಳಿದುಕೊಂಡಿದ್ದ ದಂಪತಿಯನ್ನು2005ರ ಸರೋಜಿನಿ ನಗರ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ಅಶೋಕ ರಾಂದ್ವಾರ್ ಎನ್ನುವವರು ಸಮಾಧಾನ ಪಡಿಸಿದ್ದರು. ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರಿಗೆ ಚಿಕ್ಕ ಮಗಳಿಗಾಗಿಯಾದರೂ ನೀವು ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ಧೈರ್ಯ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.