ADVERTISEMENT

ಸಿಎಂ ಸುಖುಗೆ 11 ಸಮೋಸ ಕಳುಹಿಸಿದ ಬಿಜೆಪಿ ಶಾಸಕ

ಪಿಟಿಐ
Published 9 ನವೆಂಬರ್ 2024, 11:44 IST
Last Updated 9 ನವೆಂಬರ್ 2024, 11:44 IST
   

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಈಗ ‘ಸಮೋಸ ರಾಜಕೀಯ’ದ ಕಾವು ಏರುತ್ತಿದೆ. ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರಿಗಾಗಿ ತರಿಸಿ ಇಟ್ಟಿದ್ದ ಸಮೋಸಗಳನ್ನು ಅವರ ಭದ್ರತಾ ಸಿಬ್ಬಂದಿಗೆ ನೀಡಲಾಗಿದೆ ಎಂಬ ವಿಷಯವೇ ಇಡೀ ವಿವಾದದ ಕೇಂದ್ರ ಬಿಂದು.

ಸಮೋಸಗಳನ್ನು ಮುಖ್ಯಮಂತ್ರಿಯವರ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು ಎಂಬ ಕುರಿತು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದ್ದರೆ, ವಿರೋಧ ಪಕ್ಷ ಬಿಜೆಪಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.

ಬಿಜೆಪಿ ಯುವ ಮೋರ್ಚಾ ಶಿಮ್ಲಾದಲ್ಲಿ ಸಮೋಸಗಳನ್ನು ಹಂಚಿ, ಸರ್ಕಾರದ ವಿರುದ್ಧ ಪ್ರತಿಭಟಿಸಿದೆ. ಕಾರ್ಯಕರ್ತರು ಶಿಮ್ಲಾದ ಕೆಲ ಪ್ರದೇಶಗಳಲ್ಲಿ ಅಂಗಡಿಗಳನ್ನು ಸ್ಥಾಪಿಸಿ, ಜನರಿಗೆ ಉಚಿತವಾಗಿ ಸಮೋಸಗಳನ್ನು ವಿತರಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸುಖು ಅವರ ಚಿತ್ರವಿದ್ದ ಪೋಸ್ಟರ್‌ವೊಂದಕ್ಕೂ ಸಮೋಸ ತಿನಿಸುವ ಮೂಲಕ ಪ್ರತಿಭಟಿಸಿದ್ದಾರೆ.

ಹಮೀರ್‌ಪುರ ಕ್ಷೇತ್ರದ ಬಿಜೆಪಿ ಶಾಸಕ ಆಶಿಶ್‌ ಶರ್ಮಾ ಅವರು ಮುಖ್ಯಮಂತ್ರಿ ಸುಖು ಅವರಿಗಾಗಿ 11 ಸಮೋಸಗಳನ್ನು ಆರ್ಡರ್‌ ಮಾಡಿದ್ದಾರೆ. ಸ್ವತಃ ಶರ್ಮಾ ಅವರೇ ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಹಂಚಿಕೊಂಡಿದ್ದಾರೆ.

‘ಈ ವಿಚಾರವಾಗಿ ತನಿಖೆಗೆ ಆದೇಶಿಸಿಲ್ಲ’ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಂಗ್ರೆಸ್‌ ನಾಯಕರು ಕೂಡ ಇದೇ ಮಾತನ್ನು ಹೇಳಿದ್ಧಾರೆ.

‘ನಿರುದ್ಯೋಗ, ಹಣಕಾಸು ಬಿಕ್ಕಟ್ಟು, ನೌಕರರಿಗೆ ಪಿಂಚಣಿ ಮತ್ತು ಡಿ.ಎ ಬಾಕಿ ವಿತರಣೆಯಲ್ಲಿ ವಿಳಂಬದಂತಹ ಸಮಸ್ಯೆಗಳಿಂದ ರಾಜ್ಯ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ, ಮುಖ್ಯಮಂತ್ರಿಗಳಿಗೆ ತರಿಸಲಾಗಿದ್ದ ಸಮೋಸಗಳ ವಿಚಾರವಾಗಿ ಸಿಐಡಿ ತನಿಖೆಗೆ ಆದೇಶಿಸಿರುವುದು ನಿರಾಸೆ ಮೂಡಿಸುವಂಥದ್ದು’ ಎಂದು ಬಿಜೆಪಿ ಶಾಸಕ ಶರ್ಮಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಸಮೋಸಗಳಿಗಿಂತ ಜನರ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯ. ಇದನ್ನು ಜ್ಞಾಪಿಸುವ ಸಲುವಾಗಿಯೇ ಹಾಗೂ ಸರ್ಕಾರದ ಧೋರಣೆ ಪ್ರತಿಭಟಿಸಿ ನಾನು ಮುಖ್ಯಮಂತ್ರಿಗೆ 11 ಸಮೋಸಗಳನ್ನು ಕಳುಹಿಸಿದ್ದೇನೆ’ ಎಂದು ಹೇಳಿದ್ದಾರೆ.

ಶಿಮ್ಲಾದಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಸುಖು ಅವರು ಅಕ್ಟೋಬರ್‌ 21ರಂದು ತೆರಳಿದ್ದರು. ಈ ವೇಳೆ ಅವರಿಗಾಗಿ ತರಿಸಲಾಗಿದ್ದ ಸಮೋಸ ಹಾಗೂ ಕೇಕ್‌ಗಳನ್ನು ಅವರ ಭದ್ರತಾ ಸಿಬ್ಬಂದಿಗೆ ವಿತರಿಸಲಾಗಿತ್ತು ಎನ್ನಲಾಗಿದೆ.

ನಂತರ, ಈ ವಿಚಾರವಾಗಿ ಸಿಐಡಿ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. 

‘ಸಮೋಸಗಳನ್ನು ಸಿಬ್ಬಂದಿಗೆ ವಿತರಿಸಿದ್ದು ಸರ್ಕಾರ ವಿರೋಧಿ ಹಾಗೂ ಸಿಐಡಿ ವಿರೋಧಿ ನಡೆ’ ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು ತನಿಖಾ ವರದಿಯಲ್ಲಿ ಟಿಪ್ಪಣಿ ಬರೆದಿದ್ದಾರೆ.

ಈ ವಿಚಾರವಾಗಿ ಸರ್ಕಾರ ತನಿಖೆಗೆ ಅದೇಶಿಸಲು ಮುಂದಾಗುವಂತೆ ಮಾಡಲು ಡಬ್ಬದಲ್ಲಿ ಸಮೋಸಗಳೊಂದಿಗೆ ಬೇರೆ ಏನಿದ್ದವು ಎಂಬುದು ಗೊತ್ತಾಗಬೇಕು.
ರಾಜೀವ್‌ ಭಾರದ್ವಾಜ್, ಬಿಜೆಪಿ ರಾಜ್ಯ ಉಪಾಧ್ಯಕ್ಷ
ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಯಾವುದೇ ತನಿಖೆಗೆ ಆದೇಶಿಸಿಲ್ಲ. ಏನಾದರೂ ವಿಚಾರಣೆ ನಡೆಯುತ್ತಿದ್ದಲ್ಲಿ ಅದು ಸಿಐಡಿಯ ಆಂತರಿಕ ವಿಚಾರವಷ್ಟೆ.
ನರೇಶ್‌ ಚೌಹಾಣ್‌, ಮುಖ್ಯಮಂತ್ರಿ ಸುಖು ಮಾಧ್ಯಮ ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.