ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ರಾಜೀನಾಮೆ ನಿಡಿದ್ದ ಸ್ಯಾಮ್ ಪಿತ್ರೊಡಾ ಅವರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆದೇಶಿಸಿದ್ದಾರೆ.
ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿರುವ ಪಿತ್ರೊಡಾ ಅವರು ಮೇ 8ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದನ್ನು ಆ ತಕ್ಷಣವೇ ಪಕ್ಷದ ಅಧ್ಯಕ್ಷ ಖರ್ಗೆ ಅಂಗೀಕರಿಸಿದ್ದರು.
ಭಾರತದ ವೈವಿಧ್ಯತೆ ಕುರಿತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಕೆಲವು ವಿವರಣೆಗಳು ಜನಾಂಗೀಯ ನಿಂದನೆಯವು ಎಂಬ ಆರೋಪಕ್ಕೆ ಗುರಿಯಾದ ನಂತರ ತಮ್ಮ ಸ್ಥಾನಕ್ಕೆ ಪಿತ್ರೊಡಾ ರಾಜೀನಾಮೆ ಸಲ್ಲಿಸಿದ್ದರು.
ದೇಶದ ಈಶಾನ್ಯ ರಾಜ್ಯಗಳ ಜನರನ್ನು ಚೀನೀಯರಿಗೆ, ದಕ್ಷಿಣ ಭಾಗದ ಜನರನ್ನು ಆಫ್ರಿಕನ್ನರಿಗೆ, ಪಶ್ಚಿಮ ಭಾಗದ ಜನರನ್ನು ಅರಬ್ಬರಿಗೆ, ಉತ್ತರ ಭಾರತೀಯರನ್ನು ಶ್ವೇತವರ್ಣೀಯರಿಗೆ ಹೋಲಿಸಿದ್ದು ವಿವಾದಕ್ಕೆ ತಿರುಗಿತ್ತು.
ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಅವರು ಆಡಿದ್ದ ಮಾತುಗಳನ್ನು ಬಿಜೆಪಿಯು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ನಡೆಸಲು ಬಳಸಿಕೊಂಡಿತ್ತು. ಪಿತ್ರೊಡಾ ಮಾತುಗಳಿಂದ ಕಾಂಗ್ರೆಸ್ ಪಕ್ಷವು ಎರಡೂ ಸಂದರ್ಭಗಳಲ್ಲಿ ಅಂತರ ಕಾಯ್ದುಕೊಂಡಿತ್ತು.
ಅಲ್ಲದೆ, ಪಿತ್ರೊಡಾ ಅವರು ನೀಡಿರುವ ಹೋಲಿಕೆಗಳು ದುರದೃಷ್ಟಕರ ಹಾಗೂ ಒಪ್ಪಿಕೊಳ್ಳಲು ಆಗದವು ಎಂದು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.