ADVERTISEMENT

ಟ್ರ್ಯಾಕ್ಟರ್‌ ರ‍್ಯಾಲಿ ಕೈಬಿಟ್ಟ ಎಸ್‌ಕೆಎಂ; ಬೇಡಿಕೆ ಈಡೇರಿಕೆಗಾಗಿ ಪಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 17:36 IST
Last Updated 27 ನವೆಂಬರ್ 2021, 17:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಕೃಷಿಕರ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು, ನ.29ರಂದು ಸಂಸತ್‌ ಭವನದವರೆಗೆ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್‌ ರ‍್ಯಾಲಿಯನ್ನು ಕೈಬಿಟ್ಟಿರುವುದಾಗಿ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಹೇಳಿದೆ.

ಡಿ.4ರಂದು ಮತ್ತೊಮ್ಮೆ ಸಭೆ ಸೇರಿ, ಮುಂದಿನ ಹೋರಾಟದ ರೂ‍‍ಪುರೇಷೆ ನಿರ್ಧರಿಸುವುದಾಗಿ ಶನಿವಾರ ತಿಳಿಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನವು ನ.29ರಂದು ಆರಂಭವಾಗಲಿದ್ದು, ಅದೇ ದಿನ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ರೈತರ ಸಂಘಟನೆಗಳ ಒಕ್ಕೂಟ ಎಸ್‌ಕೆಎಂ ತೀರ್ಮಾನಿಸಿತ್ತು.

ADVERTISEMENT

‘ಸಂಸತ್‌ ಭವನದವರೆಗೆ ಸೋಮವಾರ ನಡೆಸಲು ಉದ್ದೇಶಿಸಿದ್ದ ರ‍್ಯಾಲಿ ರದ್ದಾಗಿದೆ. ನಮ್ಮ ಬೇಡಿಕೆಗಳ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದು, ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ. ಆ ಬಳಿಕ ಡಿ.4ರಂದು ಮತ್ತೊಂದು ಸಭೆ ನಡೆಸಿ, ಹೋರಾಟ ನಿರ್ಧರಿಸುತ್ತೇವೆ’ ಎಂದು ಎಸ್‌ಕೆಎಂ ಮುಖಂಡ ದರ್ಶನ್‌ ಪಾಲ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರವು ರೈತರೊಂದಿಗೆ ಗೌರವಯುತ ಮಾರ್ಗದಲ್ಲಿ ಮಾತುಕತೆ ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ, ಪ್ರತಿಭಟನೆಯನ್ನು ಕೈಬಿಡುವಂತೆ ಶನಿವಾರ ಮನವಿ ಮಾಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್, ‘ಭತ್ತದ ಕೂಳೆಗೆ ಬೆಂಕಿ ಹಾಕುವುದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬ ಕೃಷಿಕರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಬೆಳೆ ವೈವಿಧ್ಯತೆ, ಕನಿಷ್ಠ ಬೆಂಬಲ ಬೆಲೆ ಖಾತರಿ ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಪ್ರಧಾನಮಂತ್ರಿ ಈಗಾಗಲೇ ಪ್ರಕಟಿಸಿರುವಂತೆ ಸಮಿತಿ ರಚನೆಯೊಂದಿಗೆ ಈ ಬೇಡಿಕೆಗಳನ್ನೂ ಈಡೇರಿಸಲಾಗುವುದು’ ಎಂದು ಹೇಳಿದ್ದರು.

‘ಪ್ರತಿಭಟನನಿರತ ರೈತರ ಮೇಲೆ ಹೂಡಿರುವ ಮೊಕದ್ದಮೆಗಳ ವಾಪಸಾತಿಯು ರಾಜ್ಯಗಳ ವ್ಯಾಪ್ತಿಗೆ ಬರಲಿದೆ. ಪ್ರಕರಣಗಳ ಗಂಭೀರತೆ ಆಧರಿಸಿ ಪ್ರಕರಣ ಕೈಬಿಡುವುದು ಹಾಗೂ ಪರಿಹಾರ ಘೋಷಣೆ ಕುರಿತು ರಾಜ್ಯ ಸರ್ಕಾರಗಳೇ ತೀರ್ಮಾನಿಸಬೇಕಿದೆ. ಮೂರು ಕೃಷಿ ಕಾಯ್ದೆಗಳನ್ನು ಕೈಬಿಡಲಾಗುವುದು ಎಂದು ಸರ್ಕಾರ ಪ್ರಕಟಿಸಿದ ನಂತರವೂ ಮುಷ್ಕರ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ, ದೊಡ್ಡ ಮನಸ್ಸು ಮಾಡಿ ಧರಣಿ ಕೈಬಿಡಬೇಕು’ ಎಂದು ಕೋರಿದ್ದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದೇ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸರ್ಕಾರವು ಲೋಕಸಭೆಯಲ್ಲಿ ಮಂಡಿಸಲಿದೆ. ಕೃಷಿ ಕಾಯ್ದೆ ರದ್ದತಿ ಮಸೂದೆ, 2021 ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಂಡಿಸಲಿದ್ದಾರೆ. ಈ ವಿಷಯವು, ಆಡಳಿತ ಹಾಗೂ ವಿರೋಧಪಕ್ಷಗಳ ನಡುವಿನ ತೀವ್ರ ಹಣಾಹಣಿಗೆ ವೇದಿಕೆಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.