ADVERTISEMENT

ಸನಾತನ ಧರ್ಮದ ನಿರ್ಮೂಲನೆ ಅಸಾಧ್ಯ: ಮೋಹನ್‌ ಭಾಗವತ್‌

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 15:32 IST
Last Updated 12 ಅಕ್ಟೋಬರ್ 2023, 15:32 IST
ಮೋಹನ್ ಭಾಗವತ್ –ಪಿಟಿಐ ಚಿತ್ರ
ಮೋಹನ್ ಭಾಗವತ್ –ಪಿಟಿಐ ಚಿತ್ರ   

ಚಂಡೀಗಢ (ಪಿಟಿಐ): ‘ಸನಾತನ ಧರ್ಮ ಹಾಗೂ ಭಾರತ ಎರಡೂ ಬೇರೆ ಬೇರೆಯಲ್ಲ. ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ. ಸನಾತನ ಧರ್ಮದ ತಳಹದಿ ಮೇಲೆಯೇ ಭಾರತೀಯ ಸಂಸ್ಕೃತಿ ಅರಳಿದೆ’ ಎಂದು ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ.

‘ಸನಾತನ ಧರ್ಮವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಹಾಗಾಗಿ, ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.

ಹರಿಯಾಣದ ರೋಹ್ಟಕ್‌ನ ಬಾಬಾ ಮಸ್ತನಾಥ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್‌ ಅವರು, ‘ಸನಾತನ ಧರ್ಮ ಎಂದರೆ ಹಿಂದೂ ರಾಷ್ಟ್ರ. ಇದರಡಿಯೇ ನಾವು ಬದುಕಬೇಕು’ ಎಂದು ಸ್ಟಾಲಿನ್‌ ಅವರ ಹೆಸರು ಪ್ರಸ್ತಾಪಿಸದೆ ತಿರುಗೇಟು ನೀಡಿದರು.

ADVERTISEMENT

‘ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳು ಈ ಧರ್ಮದೊಂದಿಗೆ ಮಿಳಿತವಾಗಿವೆ. ಎಂದಿಗೂ ಇದರ ನಿರ್ಮೂಲನೆ ಸಾಧ್ಯವಿಲ್ಲ; ಇದು ಚಿರಂತನವಾದುದು. ಹಿಂದೆಯೂ ಈ ಧರ್ಮವಿತ್ತು. ಈಗಲೂ ಇದೆ. ಭವಿಷ್ಯದಲ್ಲಿಯೂ ಅಸ್ತಿತ್ವದಲ್ಲಿ ಇರುತ್ತದೆ’ ಎಂದು ಹೇಳಿದರು.     

‘ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡಿ, ‘ಇಡೀ ವಿಶ್ವಕ್ಕೆ ಸಂಕಟ ಎದುರಾದಾಗ ಪ್ರತಿಯೊಂದು ರಾಷ್ಟ್ರವೂ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರತ್ತ ಭರವಸೆಯ ದೃಷ್ಟಿ ಹರಿಸುತ್ತದೆ. ಹಾಗಾಗಿ, ಸನಾತನ ಧರ್ಮ ಹಾಗೂ ಭಾರತದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪನೆಧ್ಯ. ಬೇರೆ ಯಾರಿಂದಲೂ ಇದು ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.