ADVERTISEMENT

Sanatana Dharma: ಸನಾತನ ಧರ್ಮವನ್ನು ಎಚ್‌ಐವಿ, ಕುಷ್ಠರೋಗಕ್ಕೆ ಹೋಲಿಸಿದ ಎ. ರಾಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2023, 10:35 IST
Last Updated 7 ಸೆಪ್ಟೆಂಬರ್ 2023, 10:35 IST
   

ಚೆನ್ನೈ: ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ಕುರಿತಂತೆ ಭಾರಿ ವಿವಾದ ತಲೆ ಎತ್ತಿರುವ ನಡುವೆಯೇ ಡಿಎಂಕೆ ಸಂಸದ ಎ ರಾಜಾ ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ರೋಗಗಳಿಗೆ ಹೋಲಿಕೆ ಮಾಡಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಉದಯನಿಧಿ ಅವರು ಸನಾತನ ಧರ್ಮದ ಬಗ್ಗೆ ನೀಡಿರುವುದು ಮೃದುವಾದ ಹೇಳಿಕೆಯಾಗಿದೆ ಎಂದು ರಾಜಾ ಹೇಳಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಸನಾತನ ಧರ್ಮ ಮತ್ತು ವಿಶ್ವಕರ್ಮ ಯೋಜನೆಗಳು ಭಿನ್ನವಲ್ಲ. ಮಲೇರಿಯಾ ಮತ್ತು ಡೆಂಗಿ ರೀತಿ ಅದನ್ನು ನಿರ್ಮೂಲನೆ ಮಾಡಬೇಕೆಂದು ಉದಯನಿಧಿ ನೀಡಿರುವ ಹೇಳಿಕೆ ಅತ್ಯಂತ ಮೃದುವಾದುದ್ದಾಗಿದೆ. ಆದ್ದರಿಂದ, ನಾವು ಇದನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಮಾಜವನ್ನು ಕಾಡುತ್ತಿರುವ ರೋಗಗಳ ರೀತಿ ನೋಡಬೇಕಾಗಿದೆ’ಎಂದು ಡಿಎಂಕೆ ಸಂಸದರು ಹೇಳಿದ್ದಾರೆ.

ADVERTISEMENT

‘ಯಾರನ್ನು ಬೇಕಾದರೂ ಕರೆದುಕೊಂಡು ಬನ್ನಿ, ನಾನು ಚರ್ಚೆಗೆ ಸಿದ್ಧನಿದ್ದೇನೆ. 10 ಲಕ್ಷ ಅಥವಾ ಒಂದು ಕೋಟಿ. ಎಷ್ಟೇ ಜನರು ಬಂದರೂ ನಾನು ತಲೆಕೆಡಿಸಿಕೊಳ್ಳಲ್ಲ. ಅವರು ಯಾವ ಮಾರಕಾಸ್ತ್ರಗಳನ್ನು ಬೇಕಾದರೂ ತೆಗೆದುಕೊಂಡು ಬರಲಿ. ನಾನು ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳನ್ನು ಇಟ್ಟುಕೊಂಡು ದೆಹಲಿಯಲ್ಲಿ ಚರ್ಚೆ ನಡೆಸುತ್ತೇನೆ’ಎಂದು ಸವಾಲು ಹಾಕಿದ್ದಾರೆ.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವಕಾಶ ಮಾಡಿಕೊಟ್ಟರೆ ಅವರ ಸಂಪುಟ ಸದಸ್ಯರಿಗೆಲ್ಲ ಈ ಕುರಿತಂತೆ ಉತ್ತರ ನೀಡಲು ಸಿದ್ಧನಿದ್ದೇನೆ. ಸನಾತನ ಧರ್ಮ ಏನೆಂಬುದನ್ನು ನಾನು ವಿವರಿಸುತ್ತೇನೆ. ಆಮೇಲೆ, ಆ ಬಗ್ಗೆ ಅವರೇ ನಿರ್ಧಾರ ಕೈಗೊಳ್ಳಲಿ’ಎಂದಿದ್ದಾರೆ.

‘ಸನಾತನ ಧರ್ಮ ಮಲೇರಿಯಾ, ಡೆಂಗಿ, ಕೊರೊನಾ ರೋಗ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಉದಯನಿಧಿ ಹೇಳಿದ್ದರು.

‘ಸಂಸತ್‌ನ ನೂತನ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಕೇಂದ್ರ ಸರ್ಕಾರದ ಈ ನಡೆ ಸನಾತನ ಧರ್ಮ ಪಾಲಿಸುವವರ ತಾರತಮ್ಯಕ್ಕೆ ನಿದರ್ಶನ’ ಎಂದೂ ಉದಯನಿಧಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.