ನವದೆಹಲಿ: ’ಸನಾತನ ಧರ್ಮ ಕುರಿತ ಡಿಎಂಕೆ ಮುಖಂಡರ ಹೇಳಿಕೆ ‘ಅತಿರೇಕತನ ಹಾಗೂ ಕಟುವಾದುದು‘. ವಿಪಕ್ಷಗಳದ್ದು ‘ಮಾನಸಿಕ ದಿವಾಳಿತನ’, ಅವರಿಗೆ ಹಿಂದೂಫೋಬಿಯಾ ಇದೆ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ಬಿಜೆಪಿ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್ ಅವರು, ‘ಎಕ್ಸ್’ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದು ಹೆಸರಿನ ಬದಲಾವಣೆಯು ಒಬ್ಬರ ಉದ್ದೇಶ ಮತ್ತು ವ್ಯಕ್ತಿತ್ವವನ್ನು ಬದಲಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಪಕ್ಷದ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಮುಂಬೈನಲ್ಲಿ ಇತ್ತೀಚೆಗೆ ನಡೆದಿದ್ದ ‘ಇಂಡಿಯಾ’ ಮೈತ್ರಿಕೂಟ ಸಭೆಯಲ್ಲೇ ಹಿಂದೂಗಳಿಗೆ ಕಳಂಕ ತರುವ ನಿರ್ಧಾರ ಕೈಗೊಳ್ಳಲಾಗಿತ್ತೆ’ ಎಂದು ಪಟ್ನಾದಲ್ಲಿ ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದರು.
‘ಹಿಂದೂಗಳ ನಂಬಿಕೆಗೆ ಕಳಂಕ ತರುವುದನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ. ಈ ವಿಷಯದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ಅವರ ಮೌನವು ಜನರನ್ನು ದಿಗ್ಭ್ರಮೆಗೊಳಿಸಿದೆ’ ಎಂದು ಹೇಳಿದರು.
ಸನಾತನ ಧರ್ಮವನ್ನು ಸಮರ್ಥಿಸಿಕೊಂಡಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, ‘ಡಿಎಂಕೆ ಒಂದು ಜಾತಿ ಪ್ರಧಾನ ಪಕ್ಷ. ಪರಿಶಿಷ್ಟರ ಸಬಲೀಕರಣಕ್ಕೆ ಅದರ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಎಷ್ಟು ಜನ ಸ್ಟಾಲಿನ್‌ಗಳಾದರೂ ಬರಲಿ. ಅವರಿಂದ ಸನಾತನ ಧರ್ಮದ ನಿರ್ಮೂಲನೆ ಅಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜಾ ಹೇಳಿಕೆ ಒಪ್ಪುವುದಿಲ್ಲ –ಕಾಂಗ್ರೆಸ್
‘ಸನಾತನ ಧರ್ಮದ ಬಗ್ಗೆ ಡಿಎಂಕೆ ಸಚಿವ ಉದಯನಿಧಿ, ಸಂಸದ ಎ.ರಾಜಾ ಅವರ ಹೇಳಿಕೆ ಒಪ್ಪುವುದಿಲ್ಲ. ಎಲ್ಲ ಧರ್ಮಗಳ ಬಗ್ಗೆಯೂ ಪಕ್ಷಕ್ಕೆ ಸಮಾನಗೌರವವಿದೆ’ ಎಂದು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿದೆ.
‘ಇಂಡಿಯಾ’ ಮೈತ್ರಿಕೂಟದ ಪ್ರತಿಯೊಬ್ಬ ಸದಸ್ಯರು ಎಲ್ಲ ಧರ್ಮ, ಸಮುದಾಯ ಮತ್ತು ನಂಬಿಕೆಗಳ ಕುರಿತು ಅಮಿತ ಗೌರವವನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದೆ.
ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ‘ಕಾಂಗ್ರೆಸ್‌ಗೆ ಸರ್ವಧರ್ಮಗಳ ಸಮನ್ವಯದಲ್ಲಿ ನಂಬಿಕೆ ಇದೆ. ಅಲ್ಲಿ, ಎಲ್ಲ ಧರ್ಮಗಳು, ಪ್ರತಿಯೊಂದು ನಂಬಿಕೆಗೂ ಸ್ಥಾನವಿದೆ ಎಂದು ಪ್ರತಿಕ್ರಿಯಿಸಿದರು.
‘ನೀವು ಯಾರದ್ದಾದರೂ ಹೇಳಿಕೆಯನ್ನು ತಿರುಚಬೇಕು ಎಂದು ಬಯಸಿದ್ದರೆ ಅದಕ್ಕಾಗಿ ನೀವು ಸ್ವತಂತ್ರರು. ಪ್ರಧಾನಿ ಅವರಿಗೆ ಸೂಕ್ತ ಎನಿಸುವುದಾದರೆ ಅವರು ಹೇಳಿಕೆಯನ್ನು ತಿರುಚಲಿ. ಆದರೆ, ‘ಇಂಡಿಯಾ’ದ ಪ್ರತಿಯೊಬ್ಬ ಸದಸ್ಯರಿಗೂ ಎಲ್ಲ ನಂಬಿಕೆ, ಧರ್ಮ, ಸಮುದಾಯಗಳ ಬಗ್ಗೆ ಅತೀವ ಗೌರವವಿದೆ‘ ಎಂದು ಖೇರಾ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.