ADVERTISEMENT

ಕೋಲ್ಕತ್ತ: ಸಂದೇಶ್‌ಖಾಲಿ; ಸಿಬಿಐಗೆ ಶಹಜಹಾನ್‌ ಒಪ್ಪಿಸಲು ಹೈಕೋರ್ಟ್ ಸೂಚನೆ

ಪಿಟಿಐ
Published 5 ಮಾರ್ಚ್ 2024, 12:34 IST
Last Updated 5 ಮಾರ್ಚ್ 2024, 12:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲ್ಕತ್ತ: ಜನವರಿ 5 ರಂದು ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳ ವಾಹನದ ಮೇಲೆ ನಡೆದ ದಾಳಿ ಪ್ರಕರಣದ ತನಿಖೆಯನ್ನು ಕಲ್ಕತ್ತ ಹೈಕೋರ್ಟ್, ಸಿಬಿಐ ತನಿಖೆಗೆ ಒಪ್ಪಿಸಿದೆ.

ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ರೈತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಆರೋಪದ ಮೇಲೆ ಫೆಬ್ರುವರಿ 29ರಂದು ಬಂಧಿಸಲ್ಪಟ್ಟಿರುವ ಆರೋಪಿ ಶಹಜಹಾನ್ ಶೇಖ್ ಅವರನ್ನೂ ಸಿಬಿಐ ಕಸ್ಟಡಿಗೆ ಒಪ್ಪಿಸುವಂತೆ ಕೋರ್ಟ್ ಆದೇಶಿಸಿದೆ.

ADVERTISEMENT

ಮಂಗಳವಾರ ಸಂಜೆ ವೇಳೆಗೆ ನಿರ್ದೇಶನಗಳ ಪಾಲನೆ ಆಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

ಇ.ಡಿ ಅಧಿಕಾರಿಗಳ ವಾಹನದ ಮೇಲೆ ಗುಂಪೊಂದು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ತನಿಖಾ ತಂಡ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿಯಾಗಿ ತನಿಖೆ ನಡೆಸಬೇಕೆಂದು ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇ.ಡಿ ಮತ್ತು ಪಶ್ಚಿಮ ಬಂಗಾಳ ಸರ್ಕಾರವು ವಿಭಾಗೀಯ ಪೀಠದ ಮುಂದೆ ಪ್ರತ್ಯೇಕ ಮನವಿ ಸಲ್ಲಿಸಿತ್ತು.

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಇ.ಡಿ ಮನವಿ ಮಾಡಿದರೆ, ರಾಜ್ಯ ಪೊಲೀಸರಿಗೆ ತನಿಖೆ ಒಪ್ಪಿಸುವಂತೆ ಸರ್ಕಾರ ವಾದಿಸಿತ್ತು.

ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ರೈತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರಕರಣದ ಆರೋಪಿಯೂ ಆಗಿರುವ ಶಹಜಹಾನ್ ಶೇಖ್ ಅವರನ್ನು ಸಿಬಿಐ, ಇ.ಡಿ ಅಥವಾ ಪಶ್ಚಿಮ ಬಂಗಾಳದ ಪೊಲೀಸರು ಬಂಧಿಸಬಹುದು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆದೇಶ ಹೊರಬಿದ್ದ ಒಂದು ದಿನದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.