ನವದೆಹಲಿ: ‘ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ’ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಮಂಗಳವಾರ ಶಿಫಾರಸು ಮಾಡಿದೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು (ಎನ್‌ಸಿಎಸ್‌ಸಿ) ಸಹ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಶಿಫಾರಸು ಮಾಡಿತ್ತು.
ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ಹಿಂಸಾಚಾರದ ಕುರಿತಂತೆ ವರದಿ ಸಲ್ಲಿಸಿದ ನಂತರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು.
‘ಸಂದೇಶ್‌ಖಾಲಿಯಲ್ಲಿನ ಪರಿಸ್ಥಿತಿ ಇಂದಿಗೂ ಭಯಾನಕವಾಗಿದೆ. ಪಶ್ಚಿಮಬಂಗಾಳದಲ್ಲಿ ಈ ಹಿಂದೆಯೂ ಅನೇಕ ಹಿಂಸಾಚಾರ ಘಟನೆಗಳು ನಡೆದಿವೆ. ಆದರೆ ಅಲ್ಲಿನ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಶಿಫಾರಸು ಮಾಡಿರುವೆ’ ಎಂದು ಶರ್ಮಾ ಹೇಳಿದರು.
‘ಟಿಎಂಸಿಯ ನಾಯಕ ಶಹಜಹಾನ್ ಶೇಖ್ ಮತ್ತು ಆತನ ಬೆಂಬಲಿಗರ ಗುಂಪು ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ಇದರೊಟ್ಟಿಗೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಸಂದೇಶ್‌ಖಾಲಿಯ ಮಹಿಳೆಯರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.