ಕೋಲ್ಕತ್ತ: ಪಶ್ವಿಮ ಬಂಗಾಳದ ಸಂದೇಶ್‌ಖಾಲಿಯ ಮತ್ತೊಬ್ಬ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಮೂವರು ತಮ್ಮನ್ನು ಅಪಹರಿಸಿ ಟಿಎಂಸಿ ಮುಖಂಡರ ಪರವಾಗಿ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಸಂದೇಶ್‌ಖಾಲಿ ಪೊಲೀಸ್ ಠಾಣೆಯಲ್ಲಿ ಗುರುವಾರ ಮಧ್ಯಾಹ್ನ 2.30ಕ್ಕೆ ದೂರು ದಾಖಲಾಗಿದೆ. ಮೂವರು ಆರೋಪಿಗಳ ಹೆಸರನ್ನೂ ದೂರಿನಲ್ಲಿ ನಮೂದಿಸಲಾಗಿದೆ. ಈವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೊವೊಂದನ್ನು ಬಿಜೆಪಿ ನಾಯಕಿ, ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾಯಿ ಬೊಗಳಿದ ಸದ್ದು ಕೇಳಿ ಮನೆಯಿಂದ ಹೊರಗೆ ಬಂದಾಗ ತಮ್ಮನ್ನು ಅಪಹರಿಸಲಾಯಿತು ಎಂದು ಮಹಿಳೆಯೊಬ್ಬಳು ಹೇಳುತ್ತಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.
‘ಸ್ಥಳೀಯ ಟಿಎಂಸಿ ನಾಯಕರಿಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪ ಸುಳ್ಳು’ ಎಂದು ನ್ಯಾಯಾಲಯದಲ್ಲಿ ಹೇಳಲು ಅಪಹರಣಕಾರರು ತಮ್ಮ ಮೇಲೆ ಒತ್ತಡ ಹೇರಿದರು ಎಂದೂ ಮಹಿಳೆ ಹೇಳಿದ್ದಾರೆ.
ಈ ವಿಡಿಯೊದ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.