ADVERTISEMENT

ಸಂದೇಶ್‌ಖಾಲಿ | ಪ್ರಕರಣ ಹಿಂಪಡೆಯಲು ಸಂತ್ರಸ್ತೆಯರಿಗೆ ಒತ್ತಾಯ: ಮಹಿಳಾ ಆಯೋಗ

​ಪ್ರಜಾವಾಣಿ ವಾರ್ತೆ
Published 10 ಮೇ 2024, 16:00 IST
Last Updated 10 ಮೇ 2024, 16:00 IST
ರೇಖಾ ಶರ್ಮಾ 
ರೇಖಾ ಶರ್ಮಾ    

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿನ ಮಹಿಳೆಯರು ತಾವು ನೀಡಿದ ದೂರುಗಳನ್ನು ಹಿಂಪಡೆಯುವಂತೆ ಟಿಎಂಸಿ ಕಾರ್ಯಕರ್ತರು ಬಲವಂತ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆರೋಪಿಸಿದೆ. ಅಲ್ಲದೆ ಈ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಅದು ಮನವಿ ಮಾಡಿದೆ. 

ಸ್ಥಳೀಯ ಬಿಜೆಪಿ ಮುಖಂಡರೊಬ್ಬರು, ಖಾಲಿ ಕಾಗದಗಳಿಗೆ ಸಂದೇಶ್‌ಖಾಲಿ ಮಹಿಳೆಯರಿಂದ ಸಹಿ ಮಾಡಿಸಿಕೊಂಡು, ಆ ಬಳಿಕ ಲೈಂಗಿಕ ದೌರ್ಜನ್ಯ ಎಸಗಿರುವ ದೂರು ದಾಖಲಿಸಲಾಗಿದೆ ಎಂಬಂತಿರುವ ಹಲವು ವಿಡಿಯೊಗಳನ್ನು ಟಿಎಂಸಿ ಗುರುವಾರ ಹಂಚಿಕೊಂಡಿತ್ತು. 

ಇದರ ಬೆನ್ನಲ್ಲೇ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಮಹಿಳಾ ಹಕ್ಕುಗಳ ತಜ್ಞರ ಸಮಿತಿಯು, ‘ಈ ಘಟನೆ ಕುರಿತು ಆದ್ಯತೆಯ ಮೇರೆಗೆ ತನಿಖೆ ಕೈಗೊಳ್ಳಬೇಕು. ಟಿಎಂಸಿ ನಾಯಕರ ಬೆದರಿಕೆಗಳಿಂದಾಗಿ ಮಹಿಳೆಯರು ತಾವು ನೀಡಿದ ದೂರುಗಳನ್ನು ಹಿಂಪಡೆಯದಂತೆ ನೋಡಿಕೊಳ್ಳಬೇಕು’ ಎಂದು ಕೋರಿಕೊಂಡಿದೆ. 

ADVERTISEMENT

ಟಿಎಂಸಿ ಕಾರ್ಯಕರ್ತರು ಭಯದ ಮೂಲಕ ಸಂದೇಶ್‌ಖಾಲಿ ಸಂತ್ರಸ್ತೆಯರ ಧ್ವನಿ ಹತ್ತಿಕ್ಕಲು ಯತ್ನಿಸುತ್ತಿದ್ದು, ಈ ಪ್ರದೇಶದಲ್ಲಿ ನ್ಯಾಯಬದ್ಧ ಚುನಾವಣಾ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಆಯೋಗ ಹೇಳಿದೆ. 

ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವು ಅಧಿಕಾರಿಗಳಿಗೆ ಸೂಚಿಸುವ ಸಾಧ್ಯತೆ ಇದೆ. 

ಈ ಕುರಿತು ತಾವು ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿರುವಂತೆ ಇರುವ ವಿಡಿಯೊಗಳನ್ನು ಟಿಎಂಸಿ ಬಿಡುಗಡೆ ಮಾಡಿದ್ದು, ಅದರಲ್ಲಿ ‘ಬಿಜೆಪಿಯು ಹಣಕಾಸಿನ ನೆರವು ನೀಡುವುದಾಗಿ ಆಮಿಷವೊಡ್ಡುತ್ತಿದೆ ಮತ್ತು ಬೆದರಿಕೆ ಒಡ್ಡುತ್ತಿದೆ’ ಎಂದು ಆರೋಪಿಸಿದ್ದರು. 

ಆಯೋಗಕ್ಕೆ ದೂರುಟಿಎಂಸಿ : ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಲಾಗುವುದು ಎಂದು ಟಿಎಂಸಿ ಪಕ್ಷವು ಶುಕ್ರವಾರ ತಿಳಿಸಿದೆ. 

ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳದ ಸಚಿವ ಹಾಗೂ ಟಿಎಂಸಿ ವಕ್ತಾರ ಶಶಿ ಪಾಂಜಾ ‘ಸಂದೇಶ್‌ಖಾಲಿ ಪ್ರಕರಣ ಸಂಬಂಧ ಸುಳ್ಳು ಆರೋಪಗಳನ್ನು ಮಾಡಿದ್ದ ರಾಜ್ಯದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ’ ಎಂದರು. 

ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಮತ್ತು ಹಿಂಸಾಚಾರಗಳು ನಡೆದಿವೆ ಎಂದು ಆರೋಪಿಸಿದ್ದ ರೇಖಾ ಶರ್ಮಾ ಫೆಬ್ರುವರಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕೋರಿದ್ದರು. 

ಹೈಕೋರ್ಟ್‌ ಮೊರೆ ಹೋದ ಬಿಜೆಪಿ ನಾಯಕ
ತಂತ್ರಜ್ಞಾನದ ನೆರವಿನಿಂದ ತಮ್ಮ ಧ್ವನಿಯನ್ನು ಅನುಕರಿಸಿ ಸಿದ್ಧಪಡಿಸಿರುವ ವಿಡಿಯೊವನ್ನು ಮಾನಹಾನಿ ಮಾಡುವ ಉದ್ದೇಶದಿಂದ ಬಿಡುಗಡೆ ಮಾಡಲಾಗಿದೆ ಎಂದಿರುವ ಸಂದೇಶ್‌ಖಾಲಿಯ ಬಿಜೆಪಿ ನಾಯಕ ಗಂಗಾಧರ್‌ ಕೋಯಲ್ ಎಂಬುವರು ಕೇಂದ್ರ ಸಂಸ್ಥೆಗಳಿಂದ ತನಗೆ ಭದ್ರತೆ ಒದಗಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಇತ್ತೀಚೆಗೆ ಕೋಯಲ್‌ ಅವರಿಗೆ ಸಂಬಂಧಿಸಿದ ಕುಟುಕು ಕಾರ್ಯಾಚರಣೆಯ ವಿಡಿಯೊವನ್ನು ಹಂಚಿಕೊಂಡಿತ್ತು. ಇಂತಹ ವಿಡಿಯೊಗಳು ಸಂದೇಶ್‌ಖಾಲಿಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತವೆ ಮತ್ತು ತಮ್ಮ ಸುರಕ್ಷತೆಗೆ ಧಕ್ಕೆ ತರುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ಈ ಕುರಿತ ಅರ್ಜಿಯ ವಿಚಾರಣೆ ಸೋಮವಾರ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.