ADVERTISEMENT

ಕಾಂಗ್ರೆಸ್‌ಗಿದು 'ಮಹಾ' ಕಳಂಕ, ತಕ್ಷಣ ರಾಹುಲ್ ಗಾಂಧಿ ಮರಳಲಿ: ಸಂಜಯ್ ನಿರುಪಮ್

ಸೋನಿಯಾ ಗಾಂಧಿಗೆ ತಪ್ಪು ಮಾಹಿತಿ ನೀಡುತ್ತಿರುವ ಸಿಡಬ್ಲ್ಯುಸಿ ವಿಸರ್ಜಿಸಲು ಸಲಹೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2019, 9:54 IST
Last Updated 23 ನವೆಂಬರ್ 2019, 9:54 IST
ಸಂಜಯ್ ನಿರುಪಮ್
ಸಂಜಯ್ ನಿರುಪಮ್   

ಮುಂಬಯಿ: ಸೋನಿಯಾ ಗಾಂಧಿಯವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ವಿಸರ್ಜಿಸಬೇಕು. ರಾಹುಲ್ ಗಾಂಧಿಯವರು ತಮಗಾದ ನಿರಾಸೆಯನ್ನು ಕಳಚಿ, ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವ ಸ್ಥಾನಕ್ಕೆ ಮರಳಬೇಕು ಎಂದು ಕಾಂಗ್ರಸ್ ಮುಖಂಡ ಸಂಜಯ್ ನಿರುಪಮ್ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ, ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದ್ದ ಕಾಂಗ್ರೆಸ್ - ಎನ್‌ಸಿಪಿ ಮಿತ್ರಕೂಟಕ್ಕೆ ಆಘಾತ ನೀಡಿದ ಬಿಜೆಪಿಯು ಶನಿವಾರ ಮುಂಜಾನೆ ಸರ್ಕಾರ ರಚಿಸಿಬಿಟ್ಟಿತ್ತು.

ADVERTISEMENT

ಈ ರೀತಿಯ ಕ್ಷಿಪ್ರ ಕ್ರಾಂತಿಯು ಹಿಂಬಾಗಿಲ ಮೂಲಕ ಅಧಿಕಾರ ಪಡೆಯುವ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಸಿರುವುದರಿಂದ ಕಾಂಗ್ರೆಸ್‌ನ ಹೆಸರು ಕೆಡಿಸಿದೆ ಎಂದು ಸಂಜಯ್ ನಿರುಪಮ್ ಹೇಳಿದರು.

ಸಿಡಬ್ಲ್ಯುಸಿ ವಿಸರ್ಜಿಸಿ

ಸೋನಿಯಾ ಗಾಂಧಿಗೆ ಸಿಡಬ್ಲ್ಯುಸಿ ಯಾವ ರೀತಿಯ ಸಲಹೆ ನೀಡಿದೆ? ಸಿಡಬ್ಲ್ಯುಸಿಯನ್ನು ಈಗ ನಂಬಲಾಗದು, ಹೀಗಾಗಿ ಅದನ್ನು ತಕ್ಷಣ ವಿಸರ್ಜಿಸಬೇಕೆಂದು ನಾನು ಸೋನಿಯಾ ಗಾಂಧಿಯವರನ್ನು ಒತ್ತಾಯಿಸುತ್ತಿದ್ದೇನೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸ ಸಿಡಬ್ಲ್ಯುಸಿ ರೂಪುಗೊಳ್ಳಲಿ, ಅವರು ಸಿದ್ಧಾಂತದ ಆಧಾರದಲ್ಲಿ ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಾರೆ ಮತ್ತು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಕೆಟ್ಟ ಕೆಲಸಕ್ಕೆ ಕೈಹಾಕಲಾರರು ಎಂದು ಸಂಜಯ್ ನಿರುಪಮ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸೈದ್ಧಾಂತಿಕವಾಗಿ ಸಂಪೂರ್ಣ ವಿರೋಧ ಇರುವ ಶಿವಸೇನಾ ಜೊತೆ ಕೈಜೋಡಿಸುವುದನ್ನು ಮಾಜಿ ಶಿವಸೈನಿಕನೂ ಆಗಿರುವ ಸಂಜಯ್ ನಿರುಪಮ್ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕೆ ಎನ್‌ಸಿಪಿ ಹಾಗೂ ಶಿವಸೇನಾ ಜೊತೆಗೂ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರಿಗೆ ಮಹಾರಾಷ್ಟ್ರದ ವಾಸ್ತವಿಕ ಸ್ಥಿತಿಯ ಅರಿವಿಲ್ಲ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

ಅಹ್ಮದ್ ಪಟೇಲ್ ಮತ್ತು ಕೆ.ಸಿ.ವೇಣುಗೋಪಾಲ್ ದೆಹಲಿಯವರು. ಮಹಾರಾಷ್ಟ್ರದಲ್ಲಿ ಹೆಚ್ಚು ತೊಡಗಿಕೊಂಡಿರುವ ನಾಯಕನೆಂದರೆ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ. ಕಾಂಗ್ರೆಸ್ ನಾಯಕತ್ವಕ್ಕೆ ಈ ರೀತಿಯ ತಪ್ಪು ಮಾಹಿತಿಗಳನ್ನು ಅವರಾದರೂ ಹೇಗೆ ನೀಡಬಲ್ಲರು? ಈ ನಾಯಕರನ್ನೇ ಪ್ರಶ್ನಿಸಲು ಇದು ಸಕಾಲ ಎಂದು, ಈಗಾಗಲೇ ಮಹಾರಾಷ್ಟ್ರದ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಸಂಜಯ್ ಹೇಳಿದರು.

ಪವರ್ ಮಾತ್ರವಲ್ಲ, ಪವಾರ್ ಕೂಡ ವಿಷ!

ತನ್ನ ಸೋದರಳಿಯ ಅಜಿತ್ ಪವಾರ್ ಮಾಡಿರುವ ಕೆಲಸದ ಬಗ್ಗೆ ತನಗೆ ಗೊತ್ತೇ ಇರಲಿಲ್ಲ ಎಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಕಿಡಿ ಕಾರಿದ ಸಂಜಯ್ ನಿರುಪಮ್, "ರಾಹುಲ್ ಗಾಂಧಿ ಒಮ್ಮೆ ಹೇಳಿದ್ದರು - ಪವರ್ (ಅಧಿಕಾರ) ಎಂಬುದು ವಿಷವಿದ್ದಂತೆ ಅಂತ. ಈಗ, ಪವಾರ್ ಕೂಡ ವಿಷವೇ" ಎಂದು ವಿಶ್ಲೇಷಿಸಿದರು.

ಜನಾದೇಶ ಧಿಕ್ಕರಿಸೋದು ಬೇಡ

ರಾಜ್ಯದ ಜನತೆ ನೀಡಿದ ಜನಾದೇಶದಲ್ಲಿ ಕಾಂಗ್ರೆಸ್ ಪಕ್ಷವು ವಿಪಕ್ಷದಲ್ಲಿ ಕೂರಬೇಕೆಂಬುದು ಸ್ಪಷ್ಟವಾಗಿತ್ತು. ಈಗ ಪಕ್ಷವೇನು ಮಾಡುತ್ತಿದೆಯೋ, ಇದರಿಂದಾಗಿ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಮತ್ತು ಕಾಂಗ್ರೆಸ್‌ನ ಬಣ್ಣವನ್ನು ಬಯಲು ಮಾಡಿದಂತಾಗಿದೆ. ಶಿವಸೇನಾದ ಕಲೆಗಳು ನಮ್ಮನ್ನೂ ಕೊಳೆಯಾಗಿಸಿವೆ ಎಂದು ಸಂಜಯ್ ನಿರುಪಮ್ ಕೆಂಡ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.