ಮುಂಬೈ: ಬಿಜೆಪಿ ಮುಖಂಡ ಕಿರಿಟ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಸಲ್ಲಿಸಿದ್ದ ಜಾಮೀನು ರಹಿತ ವಾರಂಟ್ ಅನ್ನು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶುಕ್ರವಾರ ರದ್ದುಗೊಳಿಸಿದೆ.
ಕೋರ್ಟ್ ಹಾಜರಾತಿಗೆ ವಿನಾಯಿತಿ ನೀಡಬೇಕೆಂದು ರಾವುತ್ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಸೆವ್ರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗುರುವಾರ ತಿರಸ್ಕರಿಸಿತ್ತು. ಅಲ್ಲದೇ ಹಿಂದಿನ ಆದೇಶದ ಹೊರತಾಗಿಯೂ ವಿಚಾರಣೆಗೆ ಹಾಜರಾಗದ ಕಾರಣ ರಾವುತ್ ಅವರಿಗೆ ಜಾಮೀನು ರಹಿತ ವಾರಂಟ್ ನೀಡಿತ್ತು. ಆದ ಕಾರಣ ರಾವುತ್ ಶುಕ್ರವಾರ ಕೋರ್ಟ್‌ಗೆ ಹಾಜರಾಗಿದ್ದರು. ನಂತರ ನ್ಯಾಯಾಲಯ ವಾರಂಟ್ ರದ್ದು ಮಾಡಿ, ಮುಂದಿನ ವಿಚಾರಣೆಯನ್ನು ಜನವರಿ 24ಕ್ಕೆ ನಡೆಸುವುದಾಗಿ ತಿಳಿಸಿತು.
ಮುಂಬೈ ಸಮೀಪದ ಮೀರಾ ಭಾಯಂದರ್ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಾನು ಮತ್ತು ತನ್ನ ಪತಿ ₹100 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದೇವೆ ಎಂದು ರಾವುತ್ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಸೋಮಯ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.