ಮುಂಬೈ: ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಕುಖ್ಯಾತ ಭೂಗತ ದೊರೆ ಕರೀಮ್ ಲಾಲಾನನ್ನು ಭೇಟಿ ಮಾಡಿದ್ದರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿರುವ ಶಿವಸೇನಾ ಮುಖಂಡ ಸಂಜಯ್ ರಾವುತ್, ಕಾಂಗ್ರೆಸ್ ಪ್ರತಿಭಟನೆಯ ಬಳಿಕ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.
"ಮುಂಬೈ ಪೊಲೀಸ್ ಆಯುಕ್ತ ಯಾರಾಗಬೇಕು ಮತ್ತು 'ಮಂತ್ರಾಲಯದಲ್ಲಿ (ಮಹಾರಾಷ್ಟ್ರದ ವಿಧಾನಸೌಧ)' ಯಾರು ಕುಳಿತಿರಬೇಕೆಂಬುದನ್ನು (ಕುಖ್ಯಾತ ಭೂಗತ ದೊರೆಗಳಾದ) ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಶರದ್ ಶೆಟ್ಟಿ ಮುಂತಾದವರು ನಿರ್ಣಯಿಸುತ್ತಿದ್ದ ಕಾಲವೊಂದಿತ್ತು. ಅಂದು ಇಂದಿರಾ ಗಾಂಧಿ ಕೂಡ ಕರೀಂ ಲಾಲಾನನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರು. ನಾವು ಆ ಭೂಗತ ಲೋಕವನ್ನು ನೋಡಿದ್ದೇವೆ. ಈಗ ಇದು ಸಣ್ಣ ವಿಷಯವಷ್ಟೇ" ಎಂದು ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾವುತ್ ಹೇಳಿದ್ದರು.
ಕರೀಂ ಲಾಲಾ ಎರಡು ದಶಕಗಳ ಕಾಲ ಮುಂಬೈ ಭೂಗತ ಜಗತ್ತನ್ನು ಆಳುತ್ತಿದ್ದ ಮತ್ತು ಮಾದಕ ದ್ರವ್ಯ, ಜೂಜು, ಸ್ಮಗ್ಲಿಂಗ್, ಸುಲಿಗೆ ದಂಧೆಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದ. 2002ರಲ್ಲಿ 90ರ ವಯಸ್ಸಿನಲ್ಲಿ ಆತ ಸಾವನ್ನಪ್ಪಿದ್ದ.
ಶಿವಸೇನಾ ಮುಖಂಡನ ಈ ಹೇಳಿಕೆಯು ಮಹಾರಾಷ್ಟ್ರದಲ್ಲಿ ಮೈತ್ರಿ ಮೂಲಕ ಅಧಿಕಾರದಲ್ಲಿರುವ ಕಾಂಗ್ರೆಸ್-ಶಿವಸೇನಾ ಕೂಟದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಕೂಡ ಆಕ್ಷೇಪವೆತ್ತಿದ್ದರು.
ಬಳಿಕ ಸ್ಪಷ್ಟನೆ ನೀಡಿರುವ ಸಂಜಯ್ ರಾವುತ್, 'ನಮ್ಮ ಕಾಂಗ್ರೆಸ್ ಮಿತ್ರರು ಇದರಿಂದ ಬೇಸರಗೊಳ್ಳಬೇಕಾಗಿಲ್ಲ. ನನ್ನ ಹೇಳಿಕೆಯಿಂದ ಇಂದಿರಾ ಗಾಂಧಿಯ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದಾಗಿದ್ದರೆ, ನಾನು ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿರಾ ಗಾಂಧಿ ಬಗ್ಗೆ ತನಗೆ ಗೌರವವಿದೆ. ಕರೀಂ ಲಾಲಾ ಒಬ್ಬ ಪಠಾಣ್ ಸಮುದಾಯದ ಮುಖಂಡನೂ ಹೌದು. ಸಮುದಾಯದ ಮುಖಂಡನೆಂಬ ನೆಲೆಯಲ್ಲಿ ಆತ ಇಂದಿರಾ ಸೇರಿದಂತೆ ಹಲವಾರು ರಾಜಕಾರಣಿಗಳನ್ನು ಭೇಟಿಯಾಗುತ್ತಿದ್ದ. ಆದರೆ, ಮುಂಬೈಯ ಇತಿಹಾಸ ಗೊತ್ತಿಲ್ಲದವರು, ನನ್ನ ಹೇಳಿಕೆಯನ್ನು ತಿರುಚುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರನ್ನು ಟ್ಯಾಗ್ ಮಾಡಿ ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ.
ರಾವುತ್ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದ್ದು, ತಕ್ಷಣ ಹೇಳಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.