ಮುಂಬೈ: ಮಹಾರಾಷ್ಟ್ರದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಸಂಜಯ್ ಕುಮಾರ್ ವರ್ಮಾ ಅವರನ್ನು ಮಂಗಳವಾರ ನೇಮಿಸಲಾಗಿದೆ.
ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ದೇಶನದ ಮೇರೆಗೆ ಡಿಜಿಪಿ ಹುದ್ದೆಯಿಂದ ರಶ್ಮಿ ಶುಕ್ಲಾ ಅವರನ್ನು ಬದಲಿಸಿ, ಅವರ ಸ್ಥಾನಕ್ಕೆ ವರ್ಮಾ ಅವರನ್ನು ನೇಮಿಸಲಾಗಿದೆ.
ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ, ವಿರೋಧ ಪಕ್ಷಗಳ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ರಶ್ಮಿ ಶುಕ್ಲಾ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಸ್ಥಾನದಿಂದ ತೆರವುಗೊಳಿಸಲು ಇಸಿಐ ಸೋಮವಾರ ನಿರ್ದೇಶನ ನೀಡಿತ್ತು. ಶುಕ್ಲಾ ಮಹಾರಾಷ್ಟ್ರದ ಮೊದಲ ಮಹಿಳಾ ಡಿಜಿಪಿ ಎನಿಸಿದ್ದಾರೆ.
ಶುಕ್ಲಾ ಅವರು ಅಧಿಕಾರವನ್ನು ಸೇವಾ ಹಿರಿತನದಲ್ಲಿ ನಂತರದಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿಗೆ ಹಸ್ತಾಂತರಿಸಬೇಕು ಎಂದು ಸಿಇಸಿ, ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಡಿಜಿಪಿ ಹುದ್ದೆಗೆ ಮಂಗಳವಾರ ಮಧ್ಯಾಹ್ನದೊಳಗೆ ಮೂವರು ಐಪಿಎಸ್ ಅಧಿಕಾರಿಗಳ ಹೆಸರು ಕಳುಹಿಸುವಂತೆಯೂ ಸೂಚಿಸಿತ್ತು. ವರ್ಮಾ ಅವರ ಹೆಸರನ್ನು ಇಸಿಐ ಅನುಮೋದಿಸಿದೆ. ಹಾಗಾಗಿ, ರಾಜ್ಯ ಸರ್ಕಾರ ವರ್ಮಾ ಅವರನ್ನು ಡಿಜಿಪಿಯಾಗಿ ನೇಮಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳ ನಾಯಕರ ಫೋನ್ ಕದ್ದಾಲಿಕೆಯಲ್ಲಿ ಶುಕ್ಲಾ ಅವರ ಪಾತ್ರವಿದೆ ಎಂದು ಆರೋಪಿಸಿ ಶುಕ್ಲಾ ಅವರ ವರ್ಗಾವಣೆ ಕೋರಿ ಕಾಂಗ್ರೆಸ್, ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು.
ಸೋಮವಾರ ಡಿಜಿಪಿಯಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡಿದ್ದ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ವರ್ಮಾ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಕಾನೂನು ಮತ್ತು ತಾಂತ್ರಿಕ ವಿಭಾಗದಲ್ಲಿ ಡಿಜಿಯಾಗಿ ಕೆಲಸ ಮಾಡುತ್ತಿದ್ದ ವರ್ಮಾ ಅವರು, 1990ರ ಬ್ಯಾಚ್ ಐಪಿಎಸ್ ಅಧಿಕಾರಿ. ಇವರು 2028ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ವರ್ಮಾ ಅವರು 2015ರಲ್ಲಿ ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಅವರ ಹತ್ಯೆಯ ತನಿಖೆಯನ್ನು ನಡೆಸಿದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.