ಗುವಾಹಟಿ: ಗೋ ಹತ್ಯೆ ವಿರುದ್ಧ ಆಂದೋಲನ ನಡೆಸುತ್ತಿರುವ ಆಧ್ಯಾತ್ಮಿಕ ಗುರು ಶಂಕರಾಚಾರ್ಯ ಅವರು, ಅಖಿಲ ಅರುಣಾಚಲ ಪ್ರದೇಶ ವಿದ್ಯಾರ್ಥಿಗಳ ಸಂಘಟನೆ (ಎಎಪಿಎಸ್‌ಯು) ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರ ವಿಮಾನನಿಲ್ದಾಣದಿಂದ ಗುರುವಾರ ವಾಪಸಾಗಿದ್ದಾರೆ.
ಶಂಕರಾಚಾರ್ಯ ಅವರು ‘ಗೋ ಧ್ವಜ ಸ್ಥಾಪನಾ ಭಾರತ ಯಾತ್ರಾ’ ಕೈಗೊಂಡಿದ್ದು, ಅರುಣಾಚಲ ಪ್ರದೇಶದಲ್ಲಿ ಶುಕ್ರವಾರ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದರು. ದೇಶದಲ್ಲಿ, ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಗೋವುಗಳ ಹತ್ಯೆಯನ್ನು ತಡೆಯುವ ಉದ್ದೇಶದಿಂದ ಈ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಶಂಕರಾಚಾರ್ಯ ಹಾಗೂ ಅವರ ತಂಡವಿದ್ದ ಖಾಸಗಿ ವಿಮಾನ, ಇಟಾನಗರದ ಡಾನ್‌ಯಿ ಪೋಲೊ ವಿಮಾನನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 9.30ಕ್ಕೆ ಇಳಿದಾಗ, ಎಎಪಿಎಸ್‌ಯು ಕಾರ್ಯಕರ್ತರು ನಿರ್ಗಮನ ದ್ವಾರಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಎರಡು ಗಂಟೆ ನಂತರವೂ ಪ್ರತಿಭಟನೆ ನಿಲ್ಲದಿದ್ದಾಗ, ವಾಪಸು ತೆರಳುವಂತೆ ಪಾಪುಮ್ ಪಾರೆ ಜಿಲ್ಲಾಡಳಿತ ಶಂಕರಾಚಾರ್ಯ ಅವರಿಗೆ ಮನವಿ ಮಾಡಿತು. ನಂತರ, 11.30ರ ಸುಮಾರಿಗೆ ವಿಮಾನ ನಿರ್ಗಮಿಸಿತು ಎಂದು ಮೂಲಗಳು ಹೇಳಿವೆ.
‘ನಾವು ಹಿಂದೂಗಳು ಅಥವಾ ಶಂಕರಾಚಾರ್ಯ ಅವರ ವಿರೋಧಿಗಳಲ್ಲ. ಗೋ ಹತ್ಯೆ ವಿರುದ್ಧ ಅವರು ನಡೆಸುತ್ತಿರುವ ಅಭಿಯಾನಕ್ಕೆ ನಮ್ಮ ವಿರೋಧವಿದೆ. ನಾವು ಬಯಸಿದ ಆಹಾರ ಸೇವಿಸುವುದು ನಮ್ಮ ಸಾಂವಿಧಾನಿಕ ಹಕ್ಕು’ ಎಂದು ಎಎಪಿಎಸ್‌ಯು ಪ್ರಧಾನ ಕಾರ್ಯದರ್ಶಿ ರಿತುಮ್ ತಾಲಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಆಡಳಿತವಿದೆ. ಅಲ್ಲದೇ, ರಾಜ್ಯದಲ್ಲಿ ಕ್ರೈಸ್ತರು ಬಹುಸಂಖ್ಯೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.