ಪುರಿ (ಒಡಿಶಾ): ಎಲ್ಲೆಡೆ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿದ್ದು, ಜನರು ವಿವಿಧ ರೀತಿಯ ಆಚರಣೆಯಲ್ಲಿ ತೊಡಗಿದ್ದಾರೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಒಡಿಶಾದ ಪುರಿ ಬೀಚ್‌ನಲ್ಲಿ ಮರಳು ಮತ್ತು ಈರುಳ್ಳಿ ಬಳಸಿ ಸೆಂಟಾ ಕ್ಲಾಸ್‌ನ ಕಲಾಕೃತಿಯನ್ನು ರಚಿಸಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಎರಡು ಟನ್ ಈರುಳ್ಳಿಯನ್ನು ಬಳಸಿ ಸೆಂಟಾ ಕ್ಲಾಸ್ ಕಲಾಕೃತಿಯನ್ನು ರಚಿಸಿದ್ದಾರೆ. ಅದರ ಕೆಳಗೆ ‘ಸಸಿಯನ್ನು ಕೊಡುಗೆ ನೀಡಿ, ಭೂಮಿಯನ್ನು ಹಸಿರಾಗಿಸಿ’ ಎಂಬ ಸಂದೇಶವನ್ನು ಬರೆದಿದ್ದಾರೆ.
‘ಪ್ರತಿ ವರ್ಷ, ನಾವು ಮರಳಿನಲ್ಲಿ ವಿಭಿನ್ನವಾದದ್ದನ್ನು ನಿರ್ಮಿಸಲು ಪ್ರಯತ್ನಿಸುತ್ತೇವೆ. ಕಳೆದ ವರ್ಷ ನಾವು ಟೊಮೆಟೊ ಬಳಸಿ ಸೆಂಟಾ ಕ್ಲಾಸ್ ಕಲಾಕೃತಿಯನ್ನು ರಚಿಸಿದ್ದೆವು. ಈ ಬಾರಿ ಈರುಳ್ಳಿಯಿಂದ ಕಲಾಕೃತಿ ಮಾಡಿದ್ದೇವೆ’ ಎಂದು ಪಟ್ನಾಯಕ್ ಹೇಳಿದರು.
ಈ ಕಲಾಕೃತಿಯನ್ನು ಭಾರತದ ವರ್ಲ್ಡ್ ರೆಕಾರ್ಡ್ ಬುಕ್, ಮರಳು ಮತ್ತು ಈರುಳ್ಳಿಯಲ್ಲಿ ಮೂಡಿ ಬಂದ ವಿಶ್ವದ ಅತಿದೊಡ್ಡ ಸೆಂಟಾ ಕ್ಲಾಸ್ ಕಲಾಕೃತಿ ಎಂದು ಘೋಷಿಸಿದೆ ಎಂದು ಪಟ್ನಾಯಕ್ ತಿಳಿಸಿದರು.
ಪಟ್ನಾಯಕ್ ಹಾಗೂ ಅವರ ಮರಳು ಕಲಾ ಶಾಲೆಯ ವಿದ್ಯಾರ್ಥಿಗಳು ಈ ಕಲಾಕೃತಿ ರಚಿಸಲು ಎಂಟು ಗಂಟೆ ಸಮಯ ತೆಗೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.