ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿಯಾದ ಶರತ್ ರೆಡ್ಡಿಯಿಂದ ಬಿಜೆಪಿ ₹60 ಕೋಟಿ ಪಡೆದಿದ್ದರೂ ಜಾರಿ ನಿರ್ದೇಶನಾಲಯ (ಇ.ಡಿ) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಬಕಾರಿ ನೀತಿ ಹಗರಣದಲ್ಲಿ ನನ್ನನ್ನು ಸೇರಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಲಾಗಿದೆ’ ಎಂದು ದೂರಿದ್ದಾರೆ.
‘ಇ.ಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ಅಬಕಾರಿ ನೀತಿ ಹಗರಣದ ಕಿಂಗ್‌ಪಿನ್ ಆಗಿರುವ ಶರತ್ ರೆಡ್ಡಿ ಅವರು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ₹60 ಕೋಟಿ ನೀಡಿದ್ದಾರೆ. ಆದರೆ, ಈ ವಿಷಯದಲ್ಲಿ ಇ.ಡಿ ಅಧಿಕಾರಿಗಳು ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ’ ಎಂದು ಸಿಂಗ್ ಟೀಕಿಸಿದ್ದಾರೆ.
ಶರತ್ ರೆಡ್ಡಿ ಅವರು 2022ರ ನವೆಂಬರ್ 15ರಂದು ಬಿಜೆಪಿಗೆ ₹5 ಕೋಟಿ ದೇಣಿಗೆ ನೀಡಿದ್ದರು. ಬಳಿಕ 2023ರ ಮೇ 8ರಂದು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ₹50 ಕೋಟಿ ನೀಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ಮಾರ್ಚ್ 21ರಂದು ಚುನಾವಣಾ ಬಾಂಡ್‌ಗಳ ವಿವರ ಬಹಿರಂಗವಾದ ಬೆನ್ನಲ್ಲೇ ರೆಡ್ಡಿಯಿಂದ ಬಿಜೆಪಿಗೆ ಹಣ ಸಂದಾಯವಾಗಿರುವ ಸಂಗತಿ ಗೊತ್ತಾಗಿದೆ. ಇದರ ಬೆನ್ನಲ್ಲೇ ಕೇಜ್ರಿವಾಲ್ ಅವರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದೆ ಎಂದು ಸಿಂಗ್ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.