ಕೃಷ್ಣಗಿರಿ/ಬೆಂಗಳೂರು: ತಮಿಳುನಾಡಿಗೆ ಸೋಮವಾರ ಹಿಂತಿರುಗಿದ ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಕರ್ನಾಟಕ ಗಡಿಯ ಕೃಷ್ಣಗಿರಿ ಜಿಲ್ಲೆಯ ಅಥಿಪಾಳ್ಳಿಯಲ್ಲಿ ಶಶಿಕಲಾ ಅವರ ಬೆಂಬಲಿಗರು ಡೊಳ್ಳು ಬಾರಿಸಿ, ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಶಶಿಕಲಾ ಪರ ಘೋಷಣೆಗಳನ್ನು ಹಾಕಿ ನೃತ್ಯ ಮಾಡಿದರು. ಮಹಿಳೆಯರು ತಲೆಯ ಮೇಲೆ ಹೂವುಗಳಿಂದ ಅಲಂಕೃತಗೊಂಡಿದ್ದ ’ಕಳಶ’ವನ್ನಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಬೆಂಬಲಿಗರ ಸುಮಾರು 200ಕ್ಕೂ ಹೆಚ್ಚು ವಾಹನಗಳಿದ್ದವು. ಹೊಸೂರು ನಗರದಲ್ಲಿ ಮರಿಯಮ್ಮನ್ ದೇವಾಲಯದಲ್ಲಿ ಶಶಿಕಲಾ ಪೂಜೆ ಸಲ್ಲಿಸಿದರು. ಹಲವು ಸ್ಥಳಗಳಲ್ಲಿ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್ ಮತ್ತು ಫಲಕ ಹಾಗೂ ಕಮಾನುಗಳನ್ನು ಹಾಕಲಾಗಿತ್ತು.
ಎಐಎಡಿಎಂಕೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಶಶಿಕಲಾ ಸಂಚರಿಸುತ್ತಿದ್ದ ಕಾರಿನ ಮೇಲೆ ಅದೇ ಪಕ್ಷದ ಧ್ವಜವನ್ನು ಹಾಕಲಾಗಿತ್ತು.
‘ಹಲವು ಎಐಎಡಿಎಂಕೆ ಪದಾಧಿಕಾರಿಗಳು ಶಶಿಕಲಾ ಅವರನ್ನು ಸ್ವಾಗತಿಸಲು ಬಂದಿದ್ದಾರೆ. ಶಶಿಕಲಾ ಅವರ ಕಾರಿನಲ್ಲಿ ತಾಂತ್ರಿಕ ತೊಂದರೆಯಾಗಿದ್ದರಿಂದ ಎಐಎಡಿಎಂಕೆ ಪದಾಧಿಕಾರಿಯೊಬ್ಬರ ಕಾರಿನಲ್ಲೇ ಸಂಚರಿಸುತ್ತಿದ್ದಾರೆ. ಅವರು ಸಹ ಶಶಿಕಲಾ ಜತೆ ಕಾರಿನಲ್ಲೇ ಇದ್ದಾರೆ. ಸಂಜೆ ಚೆನ್ನೈನಲ್ಲಿರುವ ಎಐಎಡಿಎಂಕೆ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್ ಅವರ ನಿವಾಸಕ್ಕೂ ಭೇಟಿ ನೀಡಲಿದ್ದಾರೆ’ ಎಂದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖ್ಯಸ್ಥ ಮತ್ತು ಶಶಿಕಲಾ ಅವರ ಸಂಬಂಧಿ ಟಿ.ಟಿ.ವಿ ದಿನಕರನ್ ತಿಳಿಸಿದ್ದಾರೆ.
ಶಶಿಕಲಾ ಅವರು ತಮಿಳುನಾಡಿಗೆ ಹಿಂತಿರುಗುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಧಾನಸಭೆ ಚುನಾವಣೆಗಳು ಕೆಲವೇ ತಿಂಗಳಲ್ಲಿ ನಡೆಯುವುದರಿಂದ ಯಾವ ರೀತಿಯ ಪರಿಣಾಮಗಳಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಶಶಿಕಲಾ ಅವರು ಈ ಹಿಂದೆ ಎಐಎಡಿಎಂಕೆ ಪಕ್ಷವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಈಗ ಮತ್ತೆ ಅದೇ ಪ್ರಯತ್ನ ಮಾಡುವ ಸಾಧ್ಯತೆಗಳಿರುವುದರಿಂದ ಸಂಘರ್ಷ ಸಂಭವಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.