ADVERTISEMENT

ಕೇರಳದಲ್ಲಿ ಭಾರಿ ಮಳೆ: ಶನಿವಾರ ಶಬರಿಮಲೆ ಅಯ್ಯಪ್ಪನ ದರ್ಶನ ಸ್ಥಗಿತ

ಪಿಟಿಐ
Published 20 ನವೆಂಬರ್ 2021, 7:35 IST
Last Updated 20 ನವೆಂಬರ್ 2021, 7:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪತ್ತನಂತಿಟ್ಟ, ಕೇರಳ: ದೇವರ ನಾಡು ಕೇರಳದಲ್ಲಿ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಪಂಪಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇವಸ್ಥಾನಕ್ಕೆ ಶನಿವಾರ ಭಕ್ತರ ಪ್ರವೇಶವನ್ನು ನಿಷೇಧಿಸಿ ಪತ್ತನಂತಿಟ್ಟ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಪತ್ತನಂತಿಟ್ಟ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಕಕ್ಕಿ-ಅನತೋಡೆ ಜಲಾಶಯ (ಗೇಟ್‌ಗಳನ್ನು ತೆರೆಯಲಾಗಿದೆ) ಮತ್ತು ಪಂಪಾ ಅಣೆಕಟ್ಟೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಯಾತ್ರಾರ್ಥಿಗಳ ಸುರಕ್ಷತೆಗಾಗಿ ಇಂದು (ನ.20) ಪಂಪಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಆದೇಶ ಹೊರಡಿಸಿದ್ದಾರೆ.

ವರ್ಚುವಲ್ ಕ್ಯೂ ಸಿಸ್ಟಂ ಮೂಲಕ ಸ್ಲಾಟ್ ಕಾಯ್ದಿರಿಸಿದ ಯಾತ್ರಾರ್ಥಿಗಳಿಗೆ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾದ ನಂತರ ಮುಂಬರುವ ಸಂಭವನೀಯ ಸ್ಲಾಟ್‌ನಲ್ಲಿ 'ದರ್ಶನ'ಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ADVERTISEMENT

'ಈ ಸಮಯದಲ್ಲಿ ಯಾತ್ರಾರ್ಥಿಗಳು ಪ್ರಯಾಣ ಕೈಗೊಳ್ಳದೆ ಪರಿಸ್ಥಿತಿಗೆ ಸಹಕರಿಸುವಂತೆ ಕೋರುತ್ತೇವೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯವು ನವೆಂಬರ್ 15ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆದಿದ್ದು, ಇಲ್ಲಿಗೆ ಬಂದು ಅಯ್ಯಪ್ಪನ ದರ್ಶನ ಪಡೆಯುವ ಭಕ್ತರಿಗೆ ಕೋವಿಡ್ ಲಸಿಕೆಯ ಪ್ರಮಾಣಪತ್ರ, ಜೊತೆಗೆ 72 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಲಾಗಿತ್ತು. ಎರಡು ತಿಂಗಳ ವಾರ್ಷಿಕ ಧಾರ್ಮಿಕ ಯಾತ್ರೆ ಅವಧಿಯೂ ಆರಂಭವಾಗಿತ್ತು.

ಸಾಂಕ್ರಾಮಿಕ ರೋಗ ಮತ್ತು ಭಾರಿ ಮಳೆ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಹರಿವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಹಿಂದಿನ ವರ್ಷದಂತೆ ಈ ಬಾರಿಯೂ ವರ್ಚುವಲ್ ಕ್ಯೂ ವ್ಯವಸ್ಥೆ ಮೂಲಕ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.