ನವದೆಹಲಿ: ‘ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಬಂಧಿಸಿಲ್ಲ. ನೈರುತ್ಯ ದೆಹಲಿಯ ಆರ್.ಕೆ.ಪುರಂನಲ್ಲಿರುವ ಠಾಣೆಗೆ ಅವರಾಗಿಯೇ ಬಂದಿದ್ದರು’ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ನಡುವೆ, ‘ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಬಂಧಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿದೆ’ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
‘ಆರ್.ಕೆ.ಪುರಂನಲ್ಲಿರುವ ಉದ್ಯಾನದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಲಿಕ್ ಅವರು ಪಾಲ್ಗೊಳ್ಳಬೇಕಿತ್ತು. ಇದು ಸಭೆ ನಡೆಸುವ ಸ್ಥಳವಲ್ಲ ಹಾಗೂ ಸಭೆ ನಡೆಸುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿಯನ್ನೂ ಪಡೆದಿಲ್ಲ ಎಂದು ಮಲಿಕ್ ಅವರಿಗೆ ತಿಳಿಸಿದೆವು. ಆಗ, ಅವರು ತಮ್ಮ ಬೆಂಬಲಿಗರ ಸಮೇತ ಜಾಗದಿಂದ ತೆರಳಿದರಲ್ಲದೇ, ತಾವಾಗಿಯೇ ಠಾಣೆಗೆ ಬಂದರು’ ಎಂದು ಪೊಲೀಸರು ಹೇಳಿದ್ದಾರೆ.
ಜಮ್ಮು–ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ವಿಮಾ ಹಗರಣಕ್ಕೆ ಸಂಬಂಧಿಸಿ ಕೆಲ ಸ್ಪಷ್ಟನೆಗಳನ್ನು ಬಯಸಿದ್ದ ಸಿಬಿಐ, ತನ್ನ ಎದುರು ಹಾಜರಾಗುವಂತೆ ಮಲಿಕ್ ಅವರಿಗೆ ಶುಕ್ರವಾರ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.