ಶ್ರೀನಗರ: ರಾಜ್ಯದ ಜನರು ಶಾಂತರಾಗಿರಬೇಕು. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ.
ವದಂತಿಗಳಿಂದಾಗಿ ಜನರು ಭಯಗೊಂಡಿದ್ದು, ಇದು ಜನಜೀವನದ ಮೇಲೆ ಪ್ರಭಾವ ಬೀರಿದೆ. ಕರ್ಫ್ಯೂ ಹೇರಿಕೆ ಮತ್ತು ಇತರ ಕ್ರಮಗಳನ್ನು ಕೈಗೊಂಡಿದ್ದೇವೆ ಎಂಬ ಸುದ್ದಿ ಕೇವಲ ವದಂತಿ. ಅದನ್ನು ನಂಬಬೇಡಿ. ಸೇನಾಪಡೆ ಕೆಲವು ಭದ್ರತಾ ಕ್ರಮಗಳನ್ನು ಕೈಗೊಂಡಿದೆ ಎಂಬುದು ನಿಜ. ಆದರೆ ಅದು ಪುಲ್ವಾಮ ದಾಳಿಗೆ ಮಾತ್ರ ಸಂಬಂಧಿಸಿದ ವಿಷಯದಲ್ಲಾಗಿದೆ ಎಂದು ಮಲಿಕ್ ಹೇಳಿದ್ದಾರೆ.
ರಾಜ್ಯ ಆಡಳಿತ ಮಂಡಳಿ ( ಎಸ್‍ಎಸಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲಿಕ್, ಉಗ್ರ ಸಂಘಟನೆಗಳಕೃತ್ಯಗಳು ಮತ್ತು ಅವರ ಕೃತ್ಯದ ಪರಿಣಾಮದಿಂದ ಸಂಭವಿಸುವ ಇನ್ನಿತರ ಕೃತ್ಯಗಳು ದೇಶ ಮತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ. ದೇಶದ ಜನರ ರಕ್ಷಣೆಗಾಗಿ ಭದ್ರತಾ ಪಡೆ ಕೆಲವು ಕ್ರಮಗಳ್ನು ಕೈಗೊಂಡಿದೆ ಎಂದಿದ್ದಾರೆ.
ಫೆ. 14ರಂದು ಪುಲ್ವಾಮ ಭಯೋತ್ಪಾದನಾ ದಾಳಿ ನಂತರ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡುವುದಕ್ಕಾಗಿ ಮಲಿಕ್ ಸಭೆ ಕರೆದಿದ್ದರು ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಕರ್ಫ್ಯೂ ಹಿಂಪಡೆದಿದ್ದು, ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದೆ ಎಂದು ಸಭೆಯಲ್ಲಿ ವಿವರಣೆ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆ 13 ಹಂತಗಳಲ್ಲಿ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಸಿಆರ್‌ಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ.ಪುಲ್ವಾಮ ದಾಳಿ ನಂತರ ಇಲ್ಲಿ ಭದ್ರತೆ ಹೆಚ್ಚಿಸಿದ್ದು, ಚುನಾವಣಾ ವೇಳೆ ಉಗ್ರರು ಯಾವುದೇ ಕೃತ್ಯವೆಸಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಕ್ತಾರರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.