ADVERTISEMENT

ಕಾಶ್ಮೀರದಲ್ಲಿ ರಾಜ್ಯದ ಸ್ಥಾನ ಮರುಸ್ಥಾಪಿಸಿ: ಸತ್ಯಪಾಲ್ ಮಲಿಕ್

ಪಿಟಿಐ
Published 25 ಅಕ್ಟೋಬರ್ 2023, 19:54 IST
Last Updated 25 ಅಕ್ಟೋಬರ್ 2023, 19:54 IST
<div class="paragraphs"><p>ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರನ್ನು ಸಂದರ್ಶಿಸಿದರು </p></div>

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರನ್ನು ಸಂದರ್ಶಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜ್ಯದ ಸ್ಥಾನ ಮರುಸ್ಥಾಪಿಸುವ ಜತೆಗೆ ವಿಧಾನಸಭೆಗೆ ಚುನಾವಣೆ ನಡೆಸಬೇಕಿದೆ’ ಎಂದು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್ ಪ್ರತಿಪಾದಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನಡೆಸಿದ 28 ನಿಮಿಷಗಳ ಸಂದರ್ಶನದಲ್ಲಿ ಮಲಿಕ್‌ ಅವರು, ಕಾಶ್ಮೀರ ಕಣಿವೆಯ ಸ್ಥಿತಿಗತಿ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.  

‘ಕಾಶ್ಮೀರಿಗಳು ಸ್ನೇಹಪರ ಗುಣಕ್ಕೆ ಹೆಸರುವಾಸಿ. ಹಾಗಾಗಿ, ಅಲ್ಲಿನ ಜನರ ಹೃದಯ ಗೆಲ್ಲುವ ಕೆಲಸವಾಗಬೇಕಿದೆ. ಅದರ ಹೊರತಾಗಿ ಭದ್ರತಾ ಪಡೆಗಳನ್ನು ಬಳಸಿಕೊಂಡು ಕಣಿವೆಯಲ್ಲಿ ಶಾಂತಿ ಸ್ಥಾಪನೆಯು ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು. 

ಸಂವಿಧಾನ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯು ಅಲ್ಲಿನ ಜನರಿಗೆ ಅಷ್ಟೊಂದು ನೋವು ನೀಡಿಲ್ಲ. ಆದರೆ, ರಾಜ್ಯದ ಸ್ಥಾನಮಾನ ರದ್ದುಪಡಿಸಿರುವುದು ಅವರಿಗೆ ಅಪಾರ ನೋವುಂಟು ಮಾಡಿದೆ ಎಂದು ಹೇಳಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜ್ಯದ ಮರುಸ್ಥಾಪನೆ ಮತ್ತು ವಿಧಾನಸಭೆಗೆ ಚುನಾವಣೆ ನಡೆಸುವ ಬಗ್ಗೆ ಸಂಸತ್‌ನಲ್ಲಿ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ಅವರು ಈ ಭರವಸೆಯ ಮಾತುಗಳು ಕಾರ್ಯರೂಪಕ್ಕೆ ಬರಬೇಕೆಂದು ನಾನು ಆಶಿಸುತ್ತೇನೆ’ ಎಂದರು.

‘ಪುಲ್ವಾಮಾ ದಾಳಿ: ರಾಜಕೀಯ ಲಾಭಕ್ಕೆ ಬಳಕೆ’

2019ರ ಪುಲ್ವಾಮಾ ದಾಳಿ ಬಗ್ಗೆ ರಾಹುಲ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲಿಕ್‌, ‘ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವೇ ಈ ದಾಳಿಯ ಹೊಣೆ ಹೊರಬೇಕಿದೆ ಎಂದು ನಾನು ಹೇಳುವುದಿಲ್ಲ. ಆದರೆ, ತಮ್ಮ ರಾಜಕೀಯ ಲಾಭಕ್ಕಾಗಿ ಈ ದಾಳಿಯನ್ನು ಅವರು ಬಳಸಿಕೊಂಡಿದ್ದು ಸತ್ಯ’ ಎಂದು ಹೇಳಿದರು.

ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ವಾಹನಗಳ ಮೇಲೆ ಉಗ್ರರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 40 ಯೋಧರು ಮೃತಪಟ್ಟಿದ್ದರು. ‘ಕೇಂದ್ರ ಸರ್ಕಾರದ ಕಡೆಯಿಂದ ಲೋಪಗಳಾಗಿತ್ತು’ ಎಂದು ಮಲಿಕ್‌ ನೀಡಿದ್ದ ಹೇಳಿಕೆಯು ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

‘ಈ ದಾಳಿ ಬಗ್ಗೆ ಏನನ್ನೂ ಮಾತನಾಡಬೇಡಿ ಎಂದು ಸರ್ಕಾರದ ಮುಖ್ಯಸ್ಥರು ನನಗೆ ತಾಕೀತು ಮಾಡಿದ್ದರು’ ಎಂದು ಮಲಿಕ್‌ ಪುನರುಚ್ಚರಿಸಿದರು.

‘ಎಷ್ಟು ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿಗಳನ್ನು ತರಲಾಗಿತ್ತು’ ಎಂಬ ರಾಹುಲ್‌ ಪ್ರಶ್ನೆಗೆ ಉತ್ತರಿಸಿದ ಮಲಿಕ್‌, ‘ಪಾಕಿಸ್ತಾನದಿಂದ ಸ್ಫೋಟಕ ಸಾಮಗ್ರಿಗಳನ್ನು ತಂದರೂ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.