ADVERTISEMENT

Video: ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2022, 5:56 IST
Last Updated 19 ನವೆಂಬರ್ 2022, 5:56 IST
   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವಿಡಿಯೊವನ್ನು ಎಎನ್‌ಐ ಶನಿವಾರ ಟ್ವೀಟಿಸಿದೆ.

ಜೈನ್ ಕೆಲ ದಿನಪತ್ರಿಕೆಗಳನ್ನು ಓದುತ್ತಾ ಮಲಗಿದ್ದು, ಒಬ್ಬ ವ್ಯಕ್ತಿ ಅವರ ಕಾಲುಗಳಿಗೆ ಮಸಾಜ್ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಸತ್ಯೇಂದ್ರ ಜೈನ್‌ ಅವರಿಗೆ ವಿಶೇಷ ಆತಿಥ್ಯ ನೀಡಿದ ಆರೋಪ ಸಂಬಂಧ ತಿಹಾರ್‌ ಜೈಲಿನ ಸೂಪರಿಂಟೆಂಡೆಂಟ್‌ ಅವರನ್ನು ಸೋಮವಾರ ಅಮಾನತು ಮಾಡಲಾಗಿತ್ತು. .ತಿಹಾರ್‌ ಜೈಲಿನಲ್ಲಿ ಜೈನ್‌ ಅವರಿಗೆ ವಿಶೇಷ ಆತಿಥ್ಯ ಲಭ್ಯವಾಗುತ್ತಿದೆ ಎಂದು ಕಳೆದವಾರ ಜಾರಿ ನಿರ್ದೇಶನಾಲಯ ಆರೋಪಿಸಿತ್ತು.

ADVERTISEMENT

ಈ ಮಧ್ಯೆ ವಿಡಿಯೊ ಬಹಿರಂಗಗೊಂಡಿರುವುದು ಆರೋಪಕ್ಕೆ ಇಂಬು ನೀಡಿದೆ.

ಸತ್ಯೇಂದ್ರ ಜೈನ್‌ ಹಾಗೂ ಅವರ ಪತ್ನಿ ಪೂನಂ ಜೈನ್‌ ಸೇರಿದಂತೆ ಇತರರ ವಿರುದ್ಧ, 2017ರಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಜೈನ್‌ ಅವರನ್ನು ಬಂಧಿಸಲಾಗಿತ್ತು. ದೆಹಲಿಯ ಆರೋಗ್ಯ, ಕೈಗಾರಿಕೆ, ವಿದ್ಯುತ್‌, ಗೃಹ, ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರಾಗಿ ಜೈನ್‌ ಕಾರ್ಯ ನಿರ್ವಹಿಸುತ್ತಿದ್ದರು.

ಜೈನ್‌ ಮತ್ತು ಅವರ ಕುಟುಂಬದ ಒಡೆತನದ ಕಂಪೆನಿಗಳಿಗೆ ಸೇರಿದ ₹ 4.81 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇ.ಡಿ ಮಾರ್ಚ್‌ 31ರಂದು ವಶಕ್ಕೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.