ಮಲೆಂಗಾವ್: ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಅವಮಾನ ಮಾಡಬೇಡಿ ಎಂದು ಶಿವಸೇನಾದ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ನಾಯಕ ಉದ್ಧವ್ ಠಾಕ್ರೆ ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಸಾವರ್ಕರ್‌ಗೆ ಅವಮಾನ ಮಾಡುವುದರಿಂದ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿಕ್ಕಟ್ಟು ಉಂಟಾಗಬಹುದು ಎಂದು ಅವರು ಹೇಳಿದ್ದಾರೆ.
‘ವಿ.ಡಿ ಸಾವರ್ಕರ್ ಅವರ ಹಿಂದುತ್ವದ ನಮ್ಮ ಆದರ್ಶವಾಗಿದ್ದು, ಕಾಂಗ್ರೆಸ್ ನಾಯಕರು ಅವರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು‘ ಎಂದು ಹೇಳಿದ್ದಾರೆ.
‘ಅಂಡಮಾನ್‌ನ ಸೆಲ್ಲುಲಾರ್ ಜೈಲಿನಲ್ಲಿ 14 ವರ್ಷಗಳ ಕಾಲ ಸಾವರ್ಕರ್ ಅವರು, ಊಹಿಸಲಾಗದ ಚಿತ್ರಹಿಂಸೆ ಅನುಭವಿಸಿದರು. ಅದು ಅವರ ತ್ಯಾಗದ ಒಂದು ರೂಪ. ನಾವು ಅವರ ಕಷ್ಟಗಳನ್ನು ಓದಲು ಮಾತ್ರ ಸಾಧ್ಯ. ಸಾವರ್ಕರ್ ಅವರನ್ನು ಅವಮಾನಿಸುವುದು ಸಹಿಸಲು ಸಾಧ್ಯವಿಲ್ಲ‘ ಎಂದು ಅವರು ಹೇಳಿದ್ದಾರೆ.
‘ಒಂದು ವೇಳೆ ರಾಹುಲ್ ಗಾಂಧಿ ಸಾವರ್ಕರ್ ಅವರನ್ನು ಅವಮಾನಿಸುವುದನ್ನು ಮುಂದುವರಿಸಿದರೆ, ವಿಪಕ್ಷಗಳ ಐಕ್ಯತೆಯಲ್ಲಿ ಬಿರುಕು ಉಂಟಾಗಬಹುದು‘ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
‘ವೀರ ಸಾವರ್ಕರ್ ಅವರು ನಮ್ಮ ದೇವರು. ಅವರ ಬಗ್ಗೆ ಅಗೌರವ ತೋರುವುದು ಸಹಿಸಲು ಸಾಧ್ಯವಿಲ್ಲ. ನಾವು ಹೋರಾಟಕ್ಕೆ ಸಜ್ಜಾಗಿದ್ದೇವೆ. ಆದರೆ ನಮ್ಮ ದೇವರನ್ನು ಅವಮಾನಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.
ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ. ‘ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ, ಗಾಂಧಿ ಕ್ಷಮೆ ಕೇಳುವುದಿಲ್ಲ‘ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.