ADVERTISEMENT

ಸಾವರ್ಕರ್‌ ಚಿಂತನೆಗಳೇ ‘ರಾಷ್ಟ್ರ ನಿರ್ಮಾಣಕ್ಕೆ’ ಆಧಾರ: ನರೇಂದ್ರ ಮೋದಿ

ಮಹಾರಾಷ್ಟ್ರ ಚುನಾವಣಾ ರ್‍ಯಾಲಿ

ಪಿಟಿಐ
Published 16 ಅಕ್ಟೋಬರ್ 2019, 19:12 IST
Last Updated 16 ಅಕ್ಟೋಬರ್ 2019, 19:12 IST
   

ಅಕೋಲಾ (ಮಹಾರಾಷ್ಟ್ರ): ‘ಹಿಂದುತ್ವದ ಪ್ರತಿಪಾದಕ ವಿನಾಯಕ ದಾಮೋದರ ಸಾವರ್ಕರ್‌ ಅವರು ಪ್ರತಿಪಾದಿಸಿದ ಮೌಲ್ಯಗಳೇ ನಮ್ಮ ರಾಷ್ಟ್ರ ನಿರ್ಮಾಣ ಸಂಕಲ್ಪದ ಆಧಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

ಸಾವರ್ಕರ್‌ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಬಿಜೆಪಿಯ ಮಹಾರಾಷ್ಟ್ರ ಘಟಕದವರು ಹೇಳಿದ ಮರುದಿನವೇ ಮೋದಿ ಈ ಮಾತು ಹೇಳಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯತೆಮುಂದಿಟ್ಟುಕೊಂಡು ರಾಷ್ಟ್ರ ನಿರ್ಮಾಣ ಮಾಡಲು ನಾವು ಮುಂದಾಗಿರುವುದಕ್ಕೆ ಸಾವರ್ಕರ್‌ ನೀಡಿದ ಮೌಲ್ಯಗಳೇ ಕಾರಣ ಎಂದು ಹೇಳಿದರು.

ADVERTISEMENT

‘ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿರುವ ವಿಚಾರವನ್ನು ಚುನಾವಣೆಯ ಸಂದರ್ಭದಲ್ಲಿ ಪ್ರಸ್ತಾಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ರಾಜಕೀಯ ಉದ್ದೇಶದಿಂದ ಕೆಲವರು, ‘ವಿಶೇಷಾಧಿಕಾರ ರದ್ದತಿಗೂ ಮಹಾರಾಷ್ಟ್ರ ಚುನಾವಣೆಗೂ ಸಂಬಂಧವೇ ಇಲ್ಲ’ ಎಂದು ವಾದಿಸುತ್ತಿದ್ದಾರೆ. ವಿರೋಧಪಕ್ಷಗಳು ಇಂಥ ನಾಚಿಕೆಗೇಡಿನ ಸ್ಥಿತಿಗೆ ಬಂದಿವೆ. ಜಮ್ಮು ಕಾಶ್ಮೀರಕ್ಕೂ ಮಹಾರಾಷ್ಟ್ರಕ್ಕೂ ಸಂಬಂಧವೇ ಇಲ್ಲವೇ? ಜಮ್ಮು ಕಾಶ್ಮೀರದವರೂ ಭಾರತ ಮಾತೆಯ ಮಕ್ಕಳೇ ಎಂಬುದನ್ನು ನಾನು ವಿರೋಧಪಕ್ಷದವರಿಗೆ ತಿಳಿಸಲು ಬಯಸುತ್ತೇನೆ’ ಎಂದರು.

ಕಾಂಗ್ರೆಸ್‌– ಎನ್‌ಸಿಪಿ ಮೈತ್ರಿಯನ್ನು ‘ಭ್ರಷ್ಟವಾದಿ ಮೈತ್ರಿ’ ಎಂದು ಬಣ್ಣಿಸಿದ ಮೋದಿ, ‘ಈ ಮೈತ್ರಿಯು ಮಹಾರಾಷ್ಟ್ರವನ್ನು ಒಂದು ದಶಕದಷ್ಟು ಹಿಂದಕ್ಕೆ ಎಳೆದೊಯ್ದಿದೆ ಎಂದು ಟೀಕಿಸಿದರು. ಒಂದು ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಸತತವಾಗಿ ಭಯೋತ್ಪಾದನಾ ಕೃತ್ಯಗಳು ಸುದ್ದಿ ಮಾಡುತ್ತಿದ್ದವು. ಈ ಕೃತ್ಯಗಳನ್ನು ನಡೆಸಿದವರು ಪರಾರಿಯಾಗಿ ಬೇರೆಬೇರೆ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ ಎಂದರು.

ಜೆಜೆಪಿಗೆ ಬೆಂಬಲ: ತನ್ವರ್‌

ನವದೆಹಲಿ: ಇತ್ತೀಚೆಗಷ್ಟೇ ಪಕ್ಷ ತೊರೆದಿರುವ, ಕಾಂಗ್ರೆಸ್‌ನ ಹರಿಯಾಣ ಘಟಕದ ಮಾಜಿ ಅಧ್ಯಕ್ಷ ಅಶೋಕ್‌ ತನ್ವರ್‌ ಅವರು ಮುಂಬರುವ ಚುನಾವಣೆಯಲ್ಲಿ ತಾವು ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಾರ್ಟಿಯನ್ನು (ಜೆಜೆಪಿ) ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

‘ನಾನು ಅತ್ಯಂತ ನೋವಿನಿಂದಲೇ ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದೇನೆ. ನನ್ನ ಬೆಂಬಲಿಗರು ಈಗ ಜೆಜೆಪಿಯನ್ನು ಬೆಂಬಲಿಸಲು ಬಯಸುತ್ತಾರೆ. ಆದ್ದರಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಉತ್ತರ ಭಾರತೀಯರ ಪ್ರಭಾವ

ಮುಂಬೈ ಹಾಗೂ ನೆರೆಯ ಠಾಣೆ, ಪಾಲ್ಘರ್‌ ಮತ್ತು ರಾಯಗಡ ಜಿಲ್ಲೆಗಳ 60 ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತರ ಭಾರತ ಮೂಲದ ಮತದಾರರು ಪರಿಣಾಮ ಬೀರಲಿದ್ದಾರೆ. ಈ ಜಿಲ್ಲೆಗಳಲ್ಲಿ ಉತ್ತರ ಭಾರತದಿಂದ, ವಿಶೇಷವಾಗಿ ಬಿಹಾರ ಹಾಗೂ ಉತ್ತರ ಪ್ರದೇಶಗಳಿಂದ ಬಂದ 40 ಲಕ್ಷ ಮತದಾರರಿದ್ದಾರೆ. ಉತ್ತರ ಭಾರತ ಮೂಲದ 12ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

‘ಮುಂಬೈ ಹಾಗೂ ಅದರ ಉಪನಗರಗಳ ಆರ್ಥಿಕತೆಗೆ ಉತ್ತರ ಭಾರತೀಯರ ಕಾಣಿಕೆ ತುಂಬಾ ಇದೆ. ಇಲ್ಲಿಯ ರಾಜಕೀಯದಲ್ಲೂ ಅವರು ಪರಿಣಾಮ ಬೀರುತ್ತಾರೆ. ಯಾವ ರಾಜಕೀಯ ಪಕ್ಷವೂ ಇವರನ್ನು ಹಗು
ರವಾಗಿ ಪರಿಗಣಿಸುವಂತಿಲ್ಲ’ ಎಂದು ರಾಜಕೀಯ ವಿಶ್ಲೇಷಕ, ಪತ್ರಕರ್ತ ಓಂಪ್ರಕಾಶ್‌ ತಿವಾರಿ ಹೇಳುತ್ತಾರೆ.

‘ಮುಂಬೈಯಲ್ಲಿ ಉತ್ತರ ಭಾರತೀಯರ ರಾಜಕಾರಣ ಕುತೂಹಲ ಮೂಡಿಸುವಂಥದ್ದು. ಅವರು ಸಾಕಷ್ಟು ವಿಚಾರ ವಿನಿಮಯ ಮಾಡಿಯೇ ಮತ ಚಲಾಯಿಸುತ್ತಾರೆ. ಒಟ್ಟಾರೆ ಸಂಖ್ಯೆ ನೋಡಿದರೆ ಮತಗಳು ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ’ ಎಂದು ಬಿಹಾರ ಮೂಲದ ಲೇಖಕ ನವೀನ್‌ ಕುಮಾರ್‌ ಹೇಳುತ್ತಾರೆ.‌

ಈ ಭಾಗದಲ್ಲಿ ಶಿವಸೇನಾದ ಪರವಾಗಿ ಉದ್ಧವ್‌ ಠಾಕ್ರೆ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿಯು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ, ರವಿಕಿಶನ್‌ ಹಾಗೂ ನಿಯಹುವಾ ಅವರಿಗೆ ಪ್ರಚಾರದ ಹೊಣೆ ವಹಿಸಿದೆ. ಕಾಂಗ್ರೆಸ್‌ ಪಕ್ಷವು ಶತ್ರುಘ್ನ ಸಿನ್ಹಾ ಅವರನ್ನು ಆಹ್ವಾನಿಸಿ ರ್‍ಯಾಲಿ ನಡೆಸಿದೆ.

‘ರಾಷ್ಟ್ರಭಕ್ತನಿಗೆ ಭಾರತ ರತ್ನಕ್ಕೆ ವಿರೋಧವೇಕೆ’

ಸಾವರ್ಕರ್‌ ಅವರಿಗೆ ಭಾರತರತ್ನ ನೀಡಬೇಕೆಂಬ ಬಿಜೆಪಿಯ ಪ್ರಸ್ತಾವವನ್ನು ವಿರೋಧಿಸಿದ ಕಾಂಗ್ರೆಸ್‌ನ ನಿಲುವಿಗೆ ಬಿಜೆಪಿ ಮುಖಂಡ, ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ದೇಶದ ಅತ್ಯುನ್ನತ ಗೌರವವನ್ನು ಒಬ್ಬ ರಾಷ್ಟ್ರಭಕ್ತನಿಗೆ ನೀಡುವುದನ್ನು ವಿರೋಧಿಸುವುದೇಕೆ? ಕಾಂಗ್ರೆಸ್‌ನವರು ಈ ಗೌರವವನ್ನು ತಮ್ಮ ಕುಟುಂಬಕ್ಕೆ ಸೀಮಿತಗೊಳಿಸಿದ್ದಾರೆ’ ಎಂದು ಅವರು ಆರೋಪಿಸಿದರು.

‘ದೇಶದ ಮೊದಲ ಗೃಹಸಚಿವ ಸರ್ದಾರ್‌ ಪಟೇಲ್‌ ಅವರಿಗಾಗಲಿ, ಅಂಬೇಡ್ಕರ್‌ಗೆ ಬಹಳ ಕಾಲದವರೆಗೆ ಈ ಗೌರವ ಕೊಟ್ಟಿರಲಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.