ADVERTISEMENT

ವಿರಾಟ್‌ ಅನ್ನು ಉಳಿಸಲು ಅತ್ತ ಶಿವಸೇನೆ ಪತ್ರ: ಇತ್ತ ಯುದ್ಧನೌಕೆ ಕಳಚುವ ಕೆಲಸ ಆರಂಭ

ಪಿಟಿಐ
Published 15 ಡಿಸೆಂಬರ್ 2020, 2:04 IST
Last Updated 15 ಡಿಸೆಂಬರ್ 2020, 2:04 IST
ಐಎನ್‌ಎಸ್‌ ವಿರಾಟ್‌
ಐಎನ್‌ಎಸ್‌ ವಿರಾಟ್‌   

ಮುಂಬೈ: ಗುಜರಾತ್‌ನ ಆಲಂಗ್‌ ಹಡಗುಕಟ್ಟೆಯಲ್ಲಿ ಕಳಚಲಾಗುತ್ತಿರುವ ಯುದ್ಧನೌಕೆ ಐಎನ್‌ಎಸ್‌ ವಿರಾಟ್‌ ಅನ್ನು ಸಂಗ್ರಹಾಲಯವಾಗಿ ಪರಿವರ್ತಿಸುವ ಉದ್ದೇಶಕ್ಕೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ನಿರಾಕ್ಷೇಪಣಾ ಪತ್ರ ನೀಡಬೇಕು ಎಂದು ಶಿವಸೇನೆ ಸೋಮವಾರ ಆಗ್ರಹಿಸಿದೆ.

ಈ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ 'ನಮ್ಮ ಮುಂದಿನ ಪೀಳಿಗೆಗೆ ಜ್ಞಾನದ ಲಾಭವನ್ನು ನೀಡದೇ, ನಮ್ಮ ಇತಿಹಾಸವನ್ನು ಕಡೆಗಣಿಸುವುದು ದೊಡ್ಡ ಅವಮಾನ,' ಎಂದು ಹೇಳಿದ್ದಾರೆ.

'ವಿರಾಟ್‌ ಸಂರಕ್ಷಣೆಗೆ ಯೋಗ್ಯವಾದದ್ದು. ಮತ್ತು ಈ ವಿಚಾರ, ಪರಿಗಣನೆಗೆ ಅರ್ಹವಾಗಿದೆ. ಭಾರತ ಸರ್ಕಾರ ಮನಸ್ಸು ಮಾಡಿದರೆ ಅದನ್ನು ಈಗಲೂ ಉಳಿಸಬಹುದು. ಐತಿಹಾಸಿಕ ಹಡಗನ್ನು ಪುನಃಸ್ಥಾಪಿಸಲು ಮತ್ತು ಸಂರಕ್ಷಿಸಲು ಮಹಾರಾಷ್ಟ್ರ ಸರ್ಕಾರ ಎಲ್ಲ ರೀತಿಯಿಂದಲೂ ಸಹಕರಿಸುವ ಖಾತ್ರಿ ನನಗಿದೆ,' ಎಂದು ಅವರು ಬರೆದಿದ್ದಾರೆ.

ADVERTISEMENT

'ನಿರಾಕ್ಷೇಪಣಾ ಪತ್ರ ನೀಡಿದರೆ ಹಡಗನ್ನು ಉಳಿಸಬಹುದು. ಯುದ್ಧ ನೌಕೆಯ ಇತಿಹಾಸವನ್ನು, ಅದರ ಮಹತ್ವವನ್ನು ನಾಗರಿಕರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ. ನೌಕೆಯನ್ನು ಒಡೆಯುವುದಕ್ಕಿಂತಲೂ ಅದನ್ನು ಉಳಿಸಿಕೊಳ್ಳುವುದೇ ಉತ್ತಮ ಆಯ್ಕೆ,' ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ನವೆಂಬರ್, 2018 ರಲ್ಲಿ ಕಡಲವಸ್ತುಗಳ ಸಂಗ್ರಹಾಲಯ ಯೋಜನೆಗಾಗಿ 852 ಕೋಟಿ ರೂ. ಮೀಸಲಿಟ್ಟಿತ್ತು. ಇದಕ್ಕಾಗಿ ಸಿಂಧುದುರ್ಗ ಜಿಲ್ಲೆಯಲ್ಲಿ ಜಾಗ ಗುರುತು ಮಾಡಲಾಗಿದೆ.

ಅಲ್ಲದೆ, ವಿರಾಟ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 'ಸಮಗ್ರ ಪ್ರವಾಸೋದ್ಯಮ ಸೌಲಭ್ಯ'ವಾಗಿ ಪರಿವರ್ತಿಸುವ ಇಚ್ಚೆಯನ್ನು ಮಹಾರಾಷ್ಟ್ರ 2019ರಲ್ಲಿ ವ್ಯಕ್ತಪಡಿಸಿತ್ತು.

ಮೂರು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಯಿಂದ ನಿವೃತ್ತಗೊಂಡಿರುವ, ವಿಶ್ವದಲ್ಲೇ ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಖ್ಯಾತಿಯ ವಿರಾಟ್‌ ಅನ್ನು ಕಳಚಲೆಂದು ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಅಲಾಂಗ್ ಕರಾವಳಿಗೆ ತರಲಾಗಿದೆ.

1987 ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದ್ದ ಈ ಯುದ್ಧನೌಕೆಯನ್ನು ಈ ವರ್ಷದ ಜುಲೈನಲ್ಲಿ ನಡೆದ ಹರಾಜಿನಲ್ಲಿ ಶ್ರೀ ರಾಮ್ ಗ್ರೂಪ್ 38.54 ಕೋಟಿ ರೂ.ಗೆ ಖರೀದಿ ಮಾಡಿದೆ.

ಕಳಚುವ ಕಾರ್ಯ ಆರಂಭ

ವಿರಾಟ್‌ ಅನ್ನು ಉಳಿಸಿಕೊಳ್ಳಲು ಅತ್ತ ಶಿವಸೇನೆ ಪ್ರಯತ್ನಿಸುತ್ತಿರುವ ನಡುವೆಯೇ, ಅತ್ತ ಆಲಂಗ್‌ನಲ್ಲಿ ಯುದ್ಧನೌಕೆಯನ್ನು ಕಳಚುವ ಕಾರ್ಯ ಆರಂಭವಾಗಿದೆ. ಅದರ ಭಾಗಗಳನ್ನು ಕಳಚಿಹಾಕಿರುವ ಚಿತ್ರದ ಸಹಿತ ಸುದ್ದಿ ಮಾಧ್ಯಮ ಎನ್‌ಡಿಟಿವಿ ವರದಿ ಮಾಡಿದೆ. 'ವಿರಾಟ್ ಅನ್ನು ಕಳಚಿದ ಚಿತ್ರಗಳು ಲಭ್ಯವಾಗಿದೆ. ಅದನ್ನು ವಸ್ತುಸಂಗ್ರಹಾಲಯವಾಗಿಸುವ ಭರವಸೆ ಮಸುಕಾಗಿದೆ,' ಎಂದು ಅದು ವರದಿ ಮಾಡಿದೆ.

ಐಎನ್‌ಎಸ್‌ ವಿರಾಟ್‌ ಕುರಿತ ಮಾಹಿತಿಗಾಗಿ ಈ ವಿಡಿಯೊ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.