ನವದೆಹಲಿ: ದೇಶದ ಅತಿ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಹಿಸಾರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಟಿಕೆಟ್ ಪಡೆಯಲು ಭಾರಿ ಕಸರತ್ತು ನಡೆಸಿದ ಬಳಿಕವೂ ವಿಫಲವಾಗಿದ್ದ ಜಿಂದಾಲ್, 18 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಾಮ್ ನಿವಾಸ್ ರಾರಾ ಅವರನ್ನು ಪರಾಭವಗೊಳಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಚಿವ ಕಮಲ್ ಗುಪ್ತಾ ಅವರು ಕೇವಲ 17 ಸಾವಿರ ಮತ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ತಮ್ಮ ಪತಿ, ಉದ್ಯಮಿ ಒ.ಪಿ. ಜಿಂದಾಲ್ ಅವರು 2005ರಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಬಳಿಕ ರಾಜಕೀಯ ರಂಗ ಪ್ರವೇಶಿಸಿದ್ದ ಸಾವಿತ್ರಿ ಜಿಂದಾಲ್, 2013ರಲ್ಲಿ ಭೂಪಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನವನ್ನೂ ಪಡೆದಿದ್ದರು. 2014ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದ ಅವರು, 2019ರಲ್ಲಿ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು.
ಜಿಂದಾಲ್ ಸಮೂಹದ ಒಡತಿಯಾಗಿರುವ 74 ವರ್ಷದ ಸಾವಿತ್ರಿ ಅವರು ₹3.65 ಲಕ್ಷ ಕೋಟಿ ಮೌಲ್ಯದ ಸಂಪತ್ತಿನ ಮಾಲೀಕರಾಗಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯ ಪಟ್ಟಿಯ ಪ್ರಕಾರ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.