ನವದೆಹಲಿ: ‘ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್, ತನ್ನ ಕುರ್ಚಿ ಉಳಿಸಿಕೊಳ್ಳಲು ಮಾಡಿದ ಕಸರತ್ತು’ ಎಂಬುದಾಗಿ ಬಿಂಬಿಸುವಂತೆ ಪಕ್ಷದ ಲೋಕಸಭಾ ಸಂಸದರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸೂಚಿಸಿದ್ದಾರೆ.
‘ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿರದೇ, ಒಂದು ರಾಷ್ಟ್ರೀಯ ಪಕ್ಷವಾಗಿದೆ. ಹೀಗಾಗಿ ಪಕ್ಷದ ಸಂಸದರ ಭಾಷಣಗಳು ಸಮಾನವಾಗಿರಬೇಕು’ ಎಂದೂ ಎಚ್ಚರಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುವುದಕ್ಕಾಗಿ ಪಕ್ಷವು 20 ಸಂಸದರನ್ನು ಆಯ್ಕೆ ಮಾಡಿದೆ. ಅಧಿವೇಶನ ವೇಳೆ, ಮುಂದಿನ ಕೆಲ ದಿನಗಳು ಬಜೆಟ್ ಮೇಲೆ ನಡೆಯುವ ಚರ್ಚೆಯಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಕುರಿತು ಚರ್ಚಿಸಲು ನಡೆಸಿದ ಸಭೆಯಲ್ಲಿ ರಾಹುಲ್ ಗಾಂಧಿ, ಸಂಸದರಿಗೆ ಈ ಸೂಚನೆ ನೀಡಿದ್ದಾರೆ.
ಬಜೆಟ್ ಮೇಲಿನ ಚರ್ಚೆಗೆ ಸದನ ನಾಯಕರು ಮಾಡಿಕೊಂಡಿರುವ ಸಿದ್ಧತೆ ಕುರಿತು ಮಾಹಿತಿ ಪಡೆದ ರಾಹುಲ್ ಗಾಂಧಿ, ಅಗತ್ಯಕಂಡುಬಂದಲ್ಲಿ ತಮ್ಮ ಕಾರ್ಯತಂತ್ರ ಮಾರ್ಪಡಿಸುವಂತೆಯೂ ಸಂಸದರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಇದೇ ಮೊದಲ ಬಾರಿಗೆ, ಕಾಂಗ್ರೆಸ್‌ನ ಸಂಸದೀಯ ಇತಿಹಾಸದಲ್ಲಿ ಇಂತಹ ಕಾರ್ಯತಂತ್ರದ ಮೊರೆ ಹೋಗಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಕೆಲ ರಾಜ್ಯಗಳಲ್ಲಿನ ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಮಾಡಲಾಗಿರುವ ಹಂಚಿಕೆ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕೆಲ ಸಂಸದರು ರಾಹುಲ್ ಗಾಂಧಿ ಅವರಿಗೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ, ‘ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ಒಂದು ರಾಜ್ಯವನ್ನು ಮತ್ತೊಂದು ರಾಜ್ಯದ ವಿರುದ್ಧ ಎತ್ತಿ ಕಟ್ಟಬಾರದು ಎಂಬುದಾಗಿ ರಾಹುಲ್ ಗಾಂಧಿ ತಾಕೀತು ಮಾಡಿದರು’ ಎಂದು ಮೂಲಗಳು ತಿಳಿಸಿವೆ.
‘ಆ ರಾಜ್ಯಕ್ಕೆ ಇಷ್ಟು ಹಂಚಿಕೆ ಮಾಡಲಾಗಿದೆ, ನಮಗೆ ಇಷ್ಟೂ ಸಿಕ್ಕಿಲ್ಲ ಎಂಬುದಾಗಿ ಹೇಳಬೇಡಿ. ನಿಮ್ಮ ರಾಜ್ಯಕ್ಕೆ ಏನು ಸಿಕ್ಕಿಲ್ಲ ಎಂಬುದಕ್ಕಷ್ಟೇ ನಿಮ್ಮ ಮಾತು ಸೀಮಿತವಾಗಿರಲಿ ಎಂಬುದಾಗಿ ಹೇಳಿದರು’ ಎಂದೂ ತಿಳಿಸಿವೆ.
ಸಂಸದೆ ಕುಮಾರಿ ಸೆಲ್ಜಾ ಅವರು ಮೊದಲು ಚರ್ಚೆ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಶಶಿ ತರೂರ್, ಪ್ರಣಿತಿ ಶಿಂದೆ, ಕಾರ್ತಿ ಚಿದಂಬರಂ, ಹೈಬಿ ಈಡೆನ್ ಹಾಗೂ ಇತರರು ಚರ್ಚೆಯಲ್ಲಿ ಪಾಲ್ಗೊಳ್ಳುವರು.
ಕಾಂಗ್ರೆಸ್ ಸಂಸದರಿಗೆ ರಾಹುಲ್ ಸೂಚನೆಗಳು
* ಸಂಸದರು ತಮ್ಮ ರಾಜ್ಯಗಳ ಸಮಸ್ಯೆಗಳನ್ನು ಪ್ರಸ್ತಾಪಿಸಬೇಕು
* ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ‘ದುರ್ಬಲ’ ಎಂಬುದಾಗಿ ಬಿಂಬಿಸಬೇಕು
* ನಿರುದ್ಯೋಗ ಅಗತ್ಯವಸ್ತುಗಳ ಬೆಲೆ ಏರಿಕೆ ಅಗ್ನಿಪಥ ಯೋಜನೆ ಕುರಿತು ಮಾತನಾಡಬೇಕು
* ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಮಾಡಿರುವ ತಾರತಮ್ಯ ವಿವರಿಸುವಾಗ ನಿರ್ದಿಷ್ಟ ರಾಜ್ಯವೊಂದಕ್ಕೆ ನೀಡಿರುವ ವಿಶೇಷ ಸವಲತ್ತನ್ನು ಟೀಕಿಸಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.